Mysore
26
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಕತ್ತರಘಟ್ಟ ಪ್ರಕರಣ | ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಪಿ.ಎಂ. ನರೇಂದ್ರಸ್ವಾಮಿ ಸೂಚನೆ

ಕೆ.ಆರ್. ಪೇಟೆ : ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸಮಗ್ರ ತನಿಖೆ ನಡೆಸಿ ಸೂಕ್ತ ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಸದನ ಸಮಿತಿ ಸದಸ್ಯರು, ವಿಧಾನ ಸಭೆ ಸಚಿವಾಲಯ ಹಾಗೂ ಮಂಡ್ಯ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ಕೆ.ಆರ್. ಪೇಟೆ ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು, ಮೃತ ಜಯಕುಮಾರ್ ಸ್ವಗ್ರಾಮ ಕತ್ತರಘಟ್ಟದ ನಿವಾಸ ಹಾಗೂ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.

ಸುಟ್ಟುಕರಕಲಾಗಿರುವ ಸ್ಥಿತಿಯಲ್ಲಿ ದೊರೆತಿರುವ ಶವದ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಮೃತ ಕುಟುಂಬಸ್ಥರ ಜೊತೆ ಸಮಗ್ರವಾಗಿ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಪೊಲೀಸ್ ಹಾಗೂ ಜಿಲ್ಲಾಡಳಿತದ ಪ್ರಮುಖರೊಂದಿಗೂ ಚರ್ಚಿಸಲಾಗಿದ್ದು, ಘಟನೆಯ ಆರಂಭಿಕ ವೈಫಲ್ಯ ಹೊರತುಪಡಿಸಿ, ಪ್ರಸ್ತುತ ತನಿಖೆ ಸರಿದಾರಿಯಲ್ಲಿ ಸಾಗುತ್ತಿದ್ದು, ಸಮಗ್ರ ತನಿಖೆಗೆ ನಿರ್ದೇಶಿಸಲಾಗಿದೆ ಎಂದರು.

ಮೃತನ ವಾರಸುದಾರರಿಂದ ಘಟನೆಯ ಸಮಗ್ರ ಮಾಹಿತಿ ಅರಿತು ಕುಟುಂಬಕ್ಕೆ ರಕ್ಷಣೆ, ಸದರಿ ಜಮೀನು ಹಸ್ತಾಂತರ, ಕುಟುಂಬಕ್ಕೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲು ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಹಲವು ಅನುಮಾನ ;
ಮೃತ ಜಯಕುಮಾರ್ ಸಾವಿನ ಬಗ್ಗೆ ಹಲವು ಅನುಮಾನಗಳು ಕುಟುಂಬಸ್ಥರಿಂದ ವ್ಯಕ್ತವಾಗಿದ್ದು, ಸೂಕ್ಷ್ಮತೆ ಅರಿತು ತನಿಖೆ ನಡೆಸುವಂತೆ ಪೊಲೀಸ್ ಹಾಗೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ವಾಸ್ತವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೃತ ಜಯಕುಮಾರ್ ಸಾವಿಗೂ ಮುನ್ನ ರೌಡಿಶೀಟರ್ ವ್ಯಕ್ತಿಯೊಬ್ಬನ ಮೇಲೆ ದೂರು ನೀಡಿದ್ದರೂ, ನಿರ್ಲಕ್ಷ್ಯ ವಹಿಸಿರುವ ಪೊಲೀಸರ ಆರಂಭಿಕ ವೈಫಲ್ಯ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸದನ ಸಮಿತಿ ಸದಸ್ಯರಾದ ಹಂಪಣ್ಣನಾಯಕ್, ಚಂದ್ರಪ್ಪ, ಪ್ರಸಾದ್ ಅಬ್ಬಯ್ಯ, ಡಾ. ತಿಮ್ಮಯ್ಯ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಎಡಿಜಿಪಿ ಅರುಣ್ ಚಕ್ರವರ್ತಿ, ಸಮಾಜ ಕಲ್ಯಾಣ ಇಲಾಖೆ ಆಯಕ್ತ ರಾಕೇಶ್‌ ಕುಮಾರ್, ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಬೋರಲಿಂಗಯ್ಯ, ಡಿಸಿಆರ್‌ಇ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಇತರರ ಉಪಸ್ಥಿತಿಯಲ್ಲಿ ಸಭೆ ನಡೆಯಿತು. ಬಳಿಕ ದಲಿತ ಮುಖಂಡರಿಂದ ಘಟನೆ ಕುರಿತಂತೆ ಅಹವಾಲು ಸ್ವೀಕರಿಸಿದರು.

Tags:
error: Content is protected !!