ಮಂಡ್ಯ : ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ದಲಿತ ಯುವಕ ಜಯಕುಮಾರ್ ಸಾವಿನ ಬಗ್ಗೆ, ಸಮಗ್ರ ತನಿಖೆ ನಡೆಸಿ ಪ್ರಕರಣದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಹೇಳಿದರು.
ಸೋಮವಾರ (ಜೂನ್.2) ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ತಿದ್ದುಪಡಿ ಕಾಯ್ದೆ -2015 ಹಾಗೂ ತಿದ್ದುಪಡಿ ನಿಯಮಗಳು 2016 ಅನ್ನು ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಜಾರಿಯಲ್ಲಿದ್ದು, ಇದರ ಬಗ್ಗೆ ಜನರಿಗೆ ತಿಳಿದಿದ್ದರು. ಪ್ರಕರಣಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಘಟನೆಯಲ್ಲಿ ದೊರೆತ ಸಾಕ್ಷಿಗಳನ್ನು ಎಫ್.ಎಸ್. ಎಲ್ ಗೆ ರವಾನಿಸಲಾಗಿದೆ, ಘಟನೆ ನಡೆದ ಹಿಂದಿನ ದಿನ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲು ಮಾಡಿಕೊಳ್ಳದೆ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಮೃತರ ಪತ್ನಿ ಹಾಗೂ ಮಕ್ಕಳಿಗೆ ಕಾನೂನು ವ್ಯಾಪ್ತಿಯಲ್ಲಿ ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಯೋಜಿಸಿದೆ. ರೂ 8.25 ಲಕ್ಷ ಪರಿಹಾರ ಮಂಜೂರು ಮಾಡಲಾಗಿದ್ದು, ರೂ4.12 ಲಕ್ಷ ಪರಿಹಾರ ಚೆಕ್ ನೀಡಲಾಗಿದೆ. ಚಾಜ್೯ ಶೀಟ್ ಸಲ್ಲಿಕೆಯಾದ ನಂತರ ಉಳಿದ ಪರಿಹಾರ ಹಣವನ್ನು ಸಹ ನೀಡಲಾಗುವುದು ತಿಂಗಳಿಗೆ ರೂ 5000 ಹಣವನ್ನು ಪಿಂಚಣಿಯಾಗಿ ನೀಡಲಾಗುವುದು ಎಂದು ಹೇಳಿದರು.
ಮೃತರ ಕುಟುಂಬದ ಹೆಸರಿನಲ್ಲಿ ಇರುವ 1ಎಕರೆ 20 ಕುಂಟೆ ಜಮೀನಿದ್ದು, ಇದಕ್ಕೆ ಪೌತಿ ಖಾತೆ ಮಾಡಿಕೊಡಲು ಹಾಗೂ ಮನೆಯ ದುರಸ್ತಿ ಮಾಡಿಕೊಡಲು ಕ್ರಮವಹಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿ ಕೊರಿಸಲಾಗುವುದು ಎಂದರು.
ಮೃತರಿಗೆ ಇಬ್ಬರು ಮಕ್ಕಳಿದ್ದು, ಅವರ ತಾಯಿ ಇಚ್ಛಿಸಿದಲ್ಲಿ ಹತ್ತಿರದ ಆಶ್ರಮ ಶಾಲೆ ಅಥವಾ ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಯೋಜನೆಯಡಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಉಚಿತ ಶಿಕ್ಷಣಕ್ಕೆ ವ್ಯವಸ್ಥ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಎಫ್.ಐ.ಆರ್ ಆದ 60 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಬೇಕು, ವಿಚಾರಣೆಯ ಸಂದರ್ಭದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿ ತಪ್ಪಿತಸ್ಥ ಕ್ರಮ ಜಾರಿಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ರಂಗಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್, ಮ ಆದರ್ಶ್, ಸ್ಮಿತಾ ಹಾಗೂ ಸಮಿತಿ ಸದಸ್ಯರಾದ ಕೆರಗೋಡು ಸೋಮಶೇಖರ್, ಮಾರಕಾಳು ಮಾಧು, ಆನಂದ್, ವಿಶ್ವನಾಥ್, ಗುರಪ್ಪ, ಉಬೇದುಲ್ಲ, ನರಸಿಂಹಮೂರ್ತಿ, ನಾಗರತ್ನ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





