Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಕೆ.ಆರ್.ಪೇಟೆ | ಲಾರಿ ಚಕ್ರಕ್ಕೆ ಸಿಲುಕಿ ಇಬ್ಬರು ಮಹಿಳೆ ಸಾವು

ಕೆ.ಆರ್.ಪೇಟೆ : ಬೀಗರ ಔತಣ ಕೂಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಿನಿ ಲಾರಿಯು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಚಕ್ರಕ್ಕೆ ಸಿಲುಕಿ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಗವಿರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 3ಗಂಟೆ ಸಮಯದಲ್ಲಿ ನಡೆದಿದೆ.

ಸಾರಂಗಿ ಗ್ರಾಮದ ಜಯರಾಮೇಗೌಡರ ಪತ್ನಿ ಶಾಂತಮ್ಮ(55), ಲಕ್ಷ್ಮಣ್ ಅವರ ಪತ್ನಿ ಸರೋಜಮ್ಮ(60) ಮೃತ ದುರ್ದೈವಿಗಳಾಗಿದ್ದಾರೆ.

ಘಟನೆ ವಿವರ: ಸಾರಂಗಿ ಗ್ರಾಮ ಯೋಗೇಶ್ ಕುಟುಂಬದವರು ಹಮ್ಮಿಕೊಂಡಿದ್ದ ಬೀಗರ ಔತಣ ಕೂಟವನ್ನು ಶ್ರೀ ಗವಿರಂಗನಾಥಸ್ವಾಮಿ ದೇವಾಲಯದ ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದರು. ಪಂಕ್ತಿಯಲ್ಲಿ ಬೇಗ ಊಟ ಮುಗಿಸಿದ ಸಾರಂಗಿ ಗ್ರಾಮದ ಶಾಂತಮ್ಮ, ಸರೋಜಮ್ಮ, ನಾಗಮ್ಮ, ತಿಮ್ಮೇಗೌಡ, ಯೋಗೇಶ್ ಮತ್ತಿತರರು ತಮ್ಮನ್ನು ಕರೆತಂದಿದ್ದ ಲಾರಿಯ ಬಳಿ ಹೋಗುತ್ತಿರುವಾಗ ಲಾರಿಯನ್ನು ಸಮತಟ್ಟು ಪ್ರದೇಶದಲ್ಲಿ ನಿಲ್ಲಿಸದೇ ಇಳಿಜಾರಿನಲ್ಲಿ ನಿಲ್ಲಿಸಿದ್ದ ಚಾಲಕನ ಅಜಾರೂಕತೆಯಿಂದ ಲಾರಿಯು ಹಿಮ್ಮುಖವಾಗಿ ಚಲಿಸಿದೆ. ಲಾರಿ ಕಡೆಗೆ ಹೊರಟಿದ್ದ ಶಾಂತಮ್ಮ ಮತ್ತು ಸರೋಜಮ್ಮ ಅವರ ಮೇಲೆ ಲಾರಿಯ ಚಕ್ರಗಳು ಹರಿದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ನಾಗಮ್ಮ ಎಂಬುವವರಿಗೂ ಗಂಭೀರವಾದ ಗಾಯಗಳಾಗಿದ್ದು ಕೆ.ಆರ್.ಪೇಟೆಯ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಕುರಿತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಸಕರ ಸಂತಾಪ: ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕರಾದ ಹೆಚ್.ಟಿ.ಮಂಜು ಅವರು ಈ ಘಟನೆ ನಡೆಯಬಾರದಿತ್ತು. ಆಕಸ್ಮಿಕವಾಗಿ ನಡೆದಿರುವ ಘಟನೆಯಲ್ಲಿ ಮೃತರಾದ ಶಾಂತಮ್ಮ ಮತ್ತು ಸರೋಜಮ್ಮ ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ. ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ದಯಾಮಯನಾದ ದೇವರು ನೀಡಲಿ ಎಂದು ಶಾಸಕರು ಪ್ರಾರ್ಥಿಸಿದ್ದಾರೆ.

ವಕೀಲರ ನಡುವೆ ಗಲಾಟೆ: ಈ ಅಪಘಾತದಲ್ಲಿ ಮೃತಪಟ್ಟಿರುವ ಶಾಂತಮ್ಮ ಮತ್ತು ಸರೋಜಮ್ಮ ಅವರಿಗೆ ಪರಿಹಾರ ಕೊಡಿಸುವ ಸಂಬಂಧದ ಕೇಸು ಪಡೆಯುವ ಸಂಬಂಧ ವಕೀಲರ ನಡುವೆ ಪರಸ್ಪರ ಮಾರಾಮಾರಿ ನಡೆದಿದ್ದು, ವಕೀಲರಾದ ಕೆ.ಬೋರೇಗೌಡ, ಎಂ.ಆರ್.ನಾಗೇಗೌಡ, ಮಂಜೇಗೌಡ ಮತ್ತಿತರರು ಪರಸ್ಪರ ಕೈ ಕೈ ಮಿಲಾಯಿಸಿದ್ದು ಹಲವು ವಕೀಲರಿಗೆ ಗಾಯಗಳಾಗಿದ್ದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Tags:
error: Content is protected !!