Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಒಳ ಮೀಸಲಾತಿ : ಮೇ 5 ರಿಂದ ದತ್ತಾಂಶ ಸಂಗ್ರಹಣೆ

ಮಂಡ್ಯ : ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಹೆಚ್‌.ಎನ್ ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದಿಂದ ದತ್ತಾಂಶ ಶೇಖರಿಸುವ ಸಮೀಕ್ಷೆಯು ಜಿಲ್ಲೆಯಲ್ಲಿ ಮೇ 5 ರಿಂದ 17 ರವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಅಧಿಕಾರಿಗಳು ಸಮೀಕ್ಷೆ ನಡಯುವ ಸಂದರ್ಭದಲ್ಲಿ ಜಿಲ್ಲೆಯ‌ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಬಿಟ್ಟು ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಕುಟುಂಬದ ಉಪಜಾತಿ, ಆರ್ಥಿಕ ಮತ್ತು ಸಾಮಾಜಿಕ‌ ಮಟ್ಟ ಸೇರಿದಂತೆ ಸಮೀಕ್ಷೆಯಲ್ಲಿ ನೀಡಲಾಗಿರುವ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಪಡೆದು ಅಪಲೋಡ್ ಮಾಡಬೇಕಿರುತ್ತದೆ. ಇದಕ್ಕಾಗಿ ಏಪ್ರಿಲ್ 28 ರಂದು ತಾಲ್ಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸುವ ಎನ್ಮುರೇಟರ್ಸ್ (enumerators) ಗೆ ತರಬೇತಿ ನೀಡಲಾಗುವುದು ಎಂದರು.

ಎನ್ಮುರೇಟರ್ಸ್ ಗಳನ್ನು ಕಡ್ಡಾಯವಾಗಿ ಶಾಲಾ ಶಿಕ್ಷಕರನ್ನು ನೇಮಿಸಬೇಕು. ಪ್ರತಿ ಎನ್ಮುರೇಟರ್ಸ್ ಗುಂಪಿನ ಕೆಲಸವನ್ನು ಪರಿಶೀಲಿಸಲು ಮುಖ್ಯ ಶಿಕ್ಷಕರನ್ನು ನೇಮಕ ಮಾಡಬೇಕು. ಮೇ 17 ರ ಸಮೀಕ್ಷೆ ಮುಗಿದ ನಂತರ ಮೇ 19 ರಿಂದ 22 ರವರೆಗೆ ಸ್ಥಳ ನಿಗದಿ ಮಾಡಿ ಶಿಬಿರ ನಡೆಸಲಾಗುವುದು. ಶಿಬಿರದಲ್ಲಿ ಯಾವುದೇ ಪರಿಶಿಷ್ಟ ಜಾತಿಯ ಕುಟುಂಬ ಸಮೀಕ್ಷೆಯಿಂದ ಬಿಟ್ಟುಹೋಗಿದ್ದಲ್ಲಿ ಸಂಪರ್ಕಿಸಿ ಸಮೀಕ್ಷೆಗೆ ಒಳಗಾಗಲೂ ಅವಕಾಶ ಸಹ ನೀಡಲಾಗಿದೆ ಎಂದರು.

ಏಪ್ರಿಲ್ 25 ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ 28 ರಂದು ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗುವುದು. ಕಂಪ್ಯೂಟರ್ ಹಾಗೂ ಸಮೀಕ್ಷೆಯ ಜ್ಞಾನವಿರುವ ಸಿಬ್ಬಂದಿಗಳನ್ನು ನಿಯೋಜಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾಯಣ್ಣಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!