ಅವಶ್ಯಕವಿರುವ ಕಡೆ ಸೂಚನಾ ಫಲಕಗಳನ್ನು ಅಳವಡಿಸಿ: ಡಾ.ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಅಪಘಾತ ವಲಯಗಳಲ್ಲಿ ಸಂಚಾರಿ ಸೂಚನಾ ಪಲಕಗಳನ್ನು ಅಳವಡಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ತಿಳಿಸಿದರು.

ಇಂದು (ಜೂ.14) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಸಮಿತಿಯಲ್ಲಿ ಇರುವ 15 ಲಕ್ಷ ರೂ ಅನುದಾನದಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಟ್ರಫಿಕ್ ಸಿಗ್ನಲ್ ಸರಿಪಡಿಸುವ ಕೆಲಸಗಳು, ಬ್ಲ್ಯಾಕ್ ಸ್ಪಟ್ ಗಳ ಬಳಿ ಸೂಚನಾ ಫಲಕಗಳು, ಹಂಪ್ ಗಳು ಸೇರಿದಂತೆ ಅವಶ್ಯಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಬ್ಲ್ಯಾಕ್ ಸ್ಪಟ್ ಗಳನ್ನು ಗುರುತಿಸಿ ಅಪಘಾತ ತಡೆಗಟ್ಟಲು ಕೈಗೊಳ್ಳಬೇಕಿರುವ ಕ್ರಮ ಹಾಗೂ ಅದಕ್ಕೆ ತಗಲುವ ವೆಚ್ಚದ ವಿವರವನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿ ಅನುದಾನ ಕೋರಿ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಜು ಸೇರಿದಂತೆ ‌ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.