ಮಂಡ್ಯ : ಸಾರ್ವಜನಿಕರಿಗೆ ಪಂಚ ಗ್ಯಾರಂಟಿ ಯೋಜನೆ ತಲುಪುವಲ್ಲಿ ಉಂಟಾಗುವ ಸಮಸ್ಯೆಯ ಜತೆಗೆ ತಾಲ್ಲೂಕಿನ ಯಾವುದೇ ಇಲಾಖೆಗಳಿಂದ ಸಾರ್ವಜನಿಕರಿಗೆ ಇನ್ನಿತರೆ ಸಮಸ್ಯೆಗಳಿದ್ದಲ್ಲಿ ಮಾಹಿತಿ ನೀಡಿ, ಜನರ ಸಮಸ್ಯೆ ಬಗೆಹರಿಸಲು ಸಹಾಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಆರ್ ನಂದಿನಿ ಅವರು ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸದಸ್ಯರಿಗೆ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಧಿಕಾರದ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪಂಚ ಗ್ಯಾರಂಟಿ ಯೋಜನೆಯ ಸವಲತ್ತು ಬಡವರಿಗೆ ತಲುಪಲು ಯೋಜನೆಯ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಸಹ ಜಿಲ್ಲೆಯಲ್ಲಿ ಏರ್ಪಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಿಕ್ಕಲಿಂಗಯ್ಯ ಅವರು ಮಾತನಾಡಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದೂರುಗಳು ಬರುತ್ತಿದ್ದು, ಗೃಹಲಕ್ಷೀ ಸಹಾಯಧನ ಫಲಾನುಭವಿಗಳಿಗೆ ತಲುಪುತ್ತಿರುವುದರ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಸಮೀಕ್ಷೆ ನಡೆಸಿ ಕಡ್ಡಾಯವಾಗಿ ಮುಂದಿನ ಸಭೆಯಲ್ಲಿ ಸಮೀಕ್ಷೆಯ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 2025 ರ ಫೆಬ್ರವರಿ ಮಾಹೆಯಿಂದ ನಗದು ಬದಲು ಅಕ್ಕಿಯನ್ನು ವಿತರಿಸಲಾಗುತ್ತಿದೆ. 2025 ರ ಫೆಬ್ರವರಿಯಿಂದ ಜೂನ್ ವರೆಗೆ ಫಲಾನುಭವಿಗಳಿಗೆ ನಗದು ಬದಲು ಅಕ್ಕಿಯನ್ನು ನೀಡಲಾಗಿರುತ್ತದೆ ಎಂದರು..
ಯುವನಿಧಿ ಯೋಜನೆಯಡಿ ಯುವನಿಧಿ ಪ್ಲಸ್ ಎಂಬ ನೂತನ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದ್ದು, ಯುವನಿಧಿ ಪ್ಲಸ್ ಯೋಜನೆಯಡಿ ಯುವನಿಧಿ ಫಲಾಭವಿಗಳಿಗೆ ಉಚಿತ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗವನ್ನು ಸಹ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಅರ್ಹ ಫಲಾನುಭವಿಗಳಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಜಿ ಟಿ ಟಿ ಸಿ, ಸಿಡಾಕ್ ಹಾಗೂ ಮೋಕ್ಷಗುಂಡಂ ಸಂಸ್ಥೆಗಳ ಮೂಲಕ ಉಚಿತ ತರಬೇತಿಯನ್ನು ನೀಡಲಾಗುವುದು. ಯುವನಿಧಿ ಪ್ಲಸ್ ಯೋಜನೆಯ ಪ್ರಮುಖ ಉದ್ದೇಶ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವುದಾಗಿದೆ. ಯುವನಿಧಿ ಯೋಜನೆಯಡಿ ನೊಂದಣೀಯಾಗಿರುವ ಫಲಾನುಭವಿಗಳು ಯುವನಿಧಿ ಪ್ಲಸ್ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
ಶಕ್ತಿ ಯೋಜನೆಯಿಂದ ಜಿಲ್ಲೆಯಲ್ಲಿನ ಮಹಿಳೆಯರಿಗೆ ದೂರಾದೂರಿಗೆ ಪ್ರಯಾಣಿಸಲು ಬಹಳ ಅನುಕೂಲವಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 2025 ರ ಏಪ್ರಿಲ್ ಮಾಹೆಯಿಂದ ಜೂನ್ ಮಾಹೆಯವರೆಗೆ ಒಟ್ಟು 1 ಕೋಟಿ 96 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ಒಟ್ಟು 61 ಕೋಟಿ ವೆಚ್ಚವಾಗಿರುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಧನುಷ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಹನುಮಂತಯ್ಯ, ರಾಜೇಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ನವೀನ್ ಕುಮಾರ್, ಜಿಲ್ಲಾ ವಿಭಾಗೀಯ ನಿಯಂತ್ರಣ ಅಧಿಕಾರಿ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





