ಮಂಡ್ಯ : ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರದ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಬಗ್ಗೆ ಸದನದಲ್ಲೂ ಚರ್ಚೆಯಾಯಿತು.
ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಖ್ಯೆ ಹೆಚ್ಚಳ ಹಿನ್ನೆಲೆ ಎನ್ಹೆಚ್ಐ ಅಧಿಕಾರಿಗಳನ್ನು ಸಂಸದೆ ಸುಮಲತಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮಂಡ್ಯ ಜಿಲ್ಲಾ ಪಂಚಾಯತ್ನ ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮತನಾಡಿದ ಅವರು ದಿನೇ ದಿನೇ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸರಿಯಾದ ಸರ್ವಿಸ್ ರಸ್ತೆಗಳಿಲ್ಲ. ಚರಂಡಿ ಕಾಮಗಾರಿಗಳು ಅಲ್ಲಲ್ಲಿ ಇನ್ನು ಬಾಕಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಇದರ ನಡುವೆ ದಿನೇ ದಿನೇ ಅಪಘಾತಗಳಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಚನ್ನಪಟ್ಟಣದ ಬಳಿ ಒಂದು ಟ್ರಕ್ನ ದೃಶ್ಯ ನೋಡಿದರೇ ಮೈ ನಡುಗಿಸುತ್ತೆ. ರಸ್ತೆ ಇರುವುದು ಜನರ ಅನುಕೂಲಕ್ಕೆ. ಜನರ ಪ್ರಾಣ ಕಳೆದುಕೊಳ್ಳುವುದಕ್ಕಲ್ಲ. ಆದಷ್ಟೂ ಬೇಗ ಹೆದ್ದಾರಿ ಸಮಸ್ಯೆಗಳನ್ನು ಸರಿಪಡಿಸಿ. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.




