ಮಂಡ್ಯ : ವಿಶ್ವದಲ್ಲಿ ಎಲ್ಲೇ ಹನುಮಂತನ ದೇವಸ್ಥಾನ ಇದ್ದರೂ ಅಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಾಣ ಮಾಡುವುದು ಶತಃಸಿದ್ಧ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಿಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಹನುಮಂತನಿಗೂ-ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ. ಆದ್ದರಿಂದಲೇ ನಾವು ಮಂದಿರ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.
2024 ರ ಜನವರಿಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ : ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರವನ್ನು 2024 ರ ಜನವರಿಯಲ್ಲಿ ನಾವು ಲೋಕಾರ್ಪಣೆ ಮಾಡುತ್ತೇವೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಯೋಧ್ಯೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೇಳಿದ್ದರು. ನಾವು ಕರ್ನಾಟಕ ಭವನ ನಿರ್ಮಾಣಕ್ಕೆ ಜಾಗ ಕೊಟ್ಟಿದ್ದೇವೆ.ಎಲ್ಲರೂ ಬಂದು ರಾಮ ಮಂದಿರ ವೀಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.
ಯುಪಿ-ಕರ್ನಾಟಕಕ್ಕೆ ಅವಿನಾಭಾವ ಸಂಬಂಧ : ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ತ್ರೇತಾಯುಗದಲ್ಲಿ ಶ್ರೀರಾಮ ವನವಾಸಕ್ಕೆ ಕರ್ನಾಟಕಕ್ಕೆ ಬಂದಾಗ ಹನುಮಂತ ಕರ್ನಾಟಕದಲ್ಲೇ ಸಿಕ್ಕಿದ್ದು. ಈ ಹಿನ್ನೆಲೆಯಲ್ಲಿ ಭಕ್ತ ಮತ್ತು ಸ್ವಾಮಿಯ ಸಂಬಂಧದ ರೀತಿಯಲ್ಲಿದೆ ಎಂದು ಹೇಳಿದರು.





