ಮಂಡ್ಯ: ಬೂದನೂರು ಗ್ರಾಮದ ಬೇಲೂರು ರಸ್ತೆಯ ಗದ್ದೆ ಬಯಲಿನಲ್ಲಿ ಪ್ಲೊಕಫೆ ಎಂಬ ಹುಕ್ಕಾ ಬಾರ್‌ನಲ್ಲಿ ಅಪ್ರಾಪ್ತರು ಅಕ್ರಮವಾಗಿ ಒಳ ಪ್ರವೇಶಿಸಿ ಕಳವು ಮಾಡಿದ್ದಲ್ಲದೇ, ಹುಕ್ಕಾ ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕಾ ಮಾರಾಟಕ್ಕೆ ಬೆಂಬಲಿಸಿದ್ದವರ ಬಂಧಿಸಿ ತನಿಖೆ ನಡೆಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡ ಬಿ.ಕೆ.ಸತೀಶ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಸ್ಥಳದಲ್ಲಿ ಹುಕ್ಕಾಬಾರ್‌ಗೆ ೨೦೨೨ರಲ್ಲಿ ಅನುಮತಿ ಪಡೆದಿದ್ದು, ೨೦೨೪ರಲ್ಲಿ ಹುಕ್ಕಾ ಬಾರ್‌ಗೆ ಸರ್ಕಾರ ನಿಷೇಧ ಏರಿದ್ದರು, ಅಕ್ರಮವಾಗಿ ಹುಕ್ಕಾ ಬಾರ್ ನಡೆಯುತ್ತಿದ್ದು, ಇದನ್ನು ಗಮನಿಸಿದ ಅಪ್ರಾಪ್ತ ಬಾಲಕರು ಕಳವು ಮಾಡಿರುವುದು ಅಲ್ಲಿನ ಸಿಸಿಟಿವಿ ದೃಶ್ಯಗಳಿಂದ ಬಹಿರಂಗಗೊಂಡಿತ್ತು, ಈಗ ಅಪ್ರಾಪ್ತನೊಬ್ಬ ಹುಕ್ಕ ಸೇವನೆಯ ವಿಡಿಯೋಗಳು ಹರಿದಾಡುತ್ತಿವೆ ಎಂದು ತಿಳಿಸಿದರು.
ಈ ಪ್ರಕರಣ ನಡೆದ ಸ್ಥಳವು ಗೋಮಾಳವಾಗಿದ್ದು, ಇದನ್ನು ಯಾವುದೇ ರೀತಿಯಲ್ಲಿ ವಾಣಿಜ್ಯ ವಹಿವಾಟಿಗೆ ನೀಡಲು ಅವಕಾಶವಿಲ್ಲದಿದ್ದರೂ ಬೂದನೂರು ಗ್ರಾ.ಪಂ ಪಿಡಿಓ ಸದಸ್ಯರ ಒತ್ತಾಯದ ಮೇರೆಗೆ ಅನುಮತಿ ನೀಡಿದ್ದಾನೆ. ಅದಲ್ಲದೆ ಈ ಪ್ರಕರಣ ಹೊರತಂದವರ ವಿರುದ್ಧವೇ ದೂರು ದಾಖಲಿಸುವಂತಹ ಘಟನೆಗಳು ನಡೆದಿವೆ ಎಂದರು.
ಹುಕ್ಕಾಬಾರ್ ವಿಷಯವಾಗಿ ದಾಖಲೆಗಳನ್ನು ತಿರುಚುವ ಕೆಲಸವಾಗುತ್ತಿದೆ. ಸಂಬಂಧಿತ ಇಲಾಖೆಗಳು ತಮ್ಮ ವೈಪಲ್ಯವನ್ನು ಮುಚ್ಚಿಹಾಕಲು ಪ್ರಯತ್ನ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ವೈಪಲ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಅಪ್ರಾಪ್ತರ ಮೊಬೈಲ್ ವಶಕ್ಕೆ ಪಡೆದು ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕಾದ ಕೆಲಸವನ್ನು ಪೊಲೀಸ್ ಇಲಾಖೆ ಮಾಡುವಲ್ಲಿ ವೈಫಲ್ಯ ತೋರಿದೆ. ಪೊಲೀಸ್ ಇಲಾಖೆ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳದೇ ಅಕ್ರಮ ಪರವಾಗಿ ಕೆಲಸ ಮಾಡುತ್ತಿದೆ ಎಂದು ದೂರಿದರು.
ಈ ಪ್ರಕರಣ ಸಂಬಂಧ ವೈಫಲ್ಯ ತೋರಿದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಬೂದನೂರು ಗ್ರಾ.ಪಂ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳಬೇಕು. ತತ್ತಕ್ಷಣ ಅಪ್ರಾಪ್ತ ಬಾಲಕರ ಮೊಬೈಲ್ ವಶಕ್ಕೆ ಪಡೆಯಬೇಕು. ಹೆಚ್ಚಿನ ಮಟ್ಟದ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಅಂಬೇಡ್ಕರ್ ವಾರಿಯರ್ಸ್‌ನ ರಾಜ್ಯಾಧ್ಯಕ್ಷ ಗಂಗರಾಜು, ಕರಾವೆ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಜಯರಾಮ್, ಸುನೀಲ್, ಕುಳ್ಳ ಇದ್ದರು.





