Mysore
24
scattered clouds

Social Media

ಶುಕ್ರವಾರ, 20 ಫೆಬ್ರವರಿ 2026
Light
Dark

ಮಂಡ್ಯಕ್ಕೆ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ : ಕೇಂದ್ರ ಸಚಿವ ಎಚ್‌ಡಿಕೆ ಘೋಷಣೆ

ನಾಗಮಂಗಲ : ಮಂಡ್ಯ ಜಿಲ್ಲೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಪಕ್ಷಾತೀತವಾಗಿ ನನ್ನನ್ನು ಈ ಕ್ಷೇತ್ರದ ಜನರು ಗೆಲ್ಲಿಸಿದ್ದಾರೆ. ಈ ಜನರಿಗೆ ದ್ರೋಹ ಮಾಡುವ ವ್ಯಕ್ತಿ ನಾನಲ್ಲ. ಮಂಡ್ಯಕ್ಕೆ ಕನಿಷ್ಠಪಕ್ಷ ಎರಡು ಕೈಗಾರಿಕೆಗಳನ್ನಾದರೂ ತರುತ್ತೇನೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದರು.

ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶುಕ್ರವಾರ ನಡೆದ ‘ವಿಜ್ಞಾತಂ ಉತ್ಸವ’ ಸಮಾರಂಭದಲ್ಲಿ ವಿಜ್ಞಾನಿ ಡಾ.ಎಂ.ಕೆ.ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದ ವತಿಯಿಂದ ನೀಡಲಾಗುವ ‘ವಿಜ್ಞಾತಂ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡಿದರು.

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಅವರು ಹೇಳಿದರು.

ವೇದಿಕೆಯ ಮೇಲೆ ಕೂತಿದ್ದ ರಾಜ್ಯದ ಸಚಿವರುಗಳ ಎದುರಿನಲ್ಲಿಯೇ ರಾಜ್ಯದ ಪ್ರಗತಿಯ ಬಗ್ಗೆ ಒತ್ತಿ ಹೇಳಿದ ಸಚಿವರು, ಈಗಾಗಲೇ ನಾನು ಘೋಷಣೆ ಮಾಡಿದಂತೆ ಮಂಡ್ಯಕ್ಕೆ 500 ಕೋಟಿ ರೂ.ವೆಚ್ಚದಲ್ಲಿ ಜಾಗತಿಕ ಮಟ್ಟದ ಎಆರ್‌ಎಐ ಸಂಶೋಧನಾ ಕೇಂದ್ರವನ್ನು ತರಲಾಗುವುದು. ಕೇಂದ್ರ ಬಜೆಟ್‌ನಲ್ಲೇ ಯೋಜನೆಗೆ ಹಣ ಮೀಸಲು ಇಡಲಾಗಿದ್ದು, 100 ಎಕರೆ ಜಾಗ ಬೇಕೆಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಅದಷ್ಟು ಬೇಗ ರಾಜ್ಯ ಸರ್ಕಾರ ಸೂಕ್ತ ಜಾಗವನ್ನು ಕೆಐಎಡಿಬಿಯಿಂದ ಗುರುತಿಸಿ ಅಭಿವೃದ್ಧಿ ಮಾಡಿ ನಮಗೆ ಹಸ್ತಾಂತರ ಮಾಡಬೇಕು. ಜನಪ್ರತಿನಿಧಿಗಳಿಗೆ ಜಾಗ ಕೊಡುವ ಅಧಿಕಾರ ಇಲ್ಲ. ಈ ಬಗ್ಗೆ ರಾಜಕೀಯ ಅಗತ್ಯ ಇಲ್ಲ ಎಂದು ಹೇಳಿದರು.

ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್‌ಎಐ) ಕೇಂದ್ರಕ್ಕೆ ಕೊನೆ ಪಕ್ಷ 1000 ಕೋಟಿ ರೂ.ಗಳನ್ನಾದರೂ ಹೂಡಿಕೆ ಮಾಡಲಾಗುವುದು. ಈ ಯೋಜನೆ ಮಂಡ್ಯದ ಚಿತ್ರಣವನ್ನೇ ಬದಲಿಸಲಿದೆ. ಉದ್ಯೋಗ ಸೃಷ್ಟಿ ಅಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಭಾರೀ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ಅನ್ನು ಸೃಷ್ಟಿ ಮಾಡುತ್ತದೆ. ಜತೆಗೆ ಮತ್ತೊಂದು ಕೈಗಾರಿಕೆಯನ್ನು ತರುವ ಬಗ್ಗೆ ನಾನು ನಿಕಟವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 13ನೇ ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಪರಮಪೂಜ್ಯರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಗೋಸಾಯಿ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವರಾದ ಎನ್.ಚಲುವರಾಯಸ್ವಾಮಿ, ಕೆ.ಎಚ್.ಮುನಿಯಪ್ಪ, ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಸುರೇಶ್‌ಗೌಡ ಭಾಗವಹಿಸಿದ್ದರು.

Tags:
error: Content is protected !!