Mysore
21
few clouds

Social Media

ಶನಿವಾರ, 24 ಜನವರಿ 2026
Light
Dark

ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಜಾಗ ನೀಡುವಂತೆ ಸಿಎಂಗೆ ಪತ್ರ ಬರೆದಿದ್ದೇನೆ : ಎಚ್‌ಡಿಕೆ

ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ

ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಅದಕ್ಕೆ ಪೂರಕವಾಗಿ ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ವತಿಯಿಂದಲೇ ಕೈಗಾರಿಕೆ ಸ್ಥಾಪನೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಈ ಬಗ್ಗೆ ಬೇರೆ ಯಾರ ಸರ್ಟಿಫಿಕೇಟ್ ಬೇಕಿಲ್ಲ. ಈ ಬಗ್ಗೆ ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಮಂಡ್ಯದಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಆಟೋಮ್ಯಾಟಿವ್ ರಿಸರ್ಚ್ ಅಸೋಸಿಯೆಷನ್ ಆಫ್ ಇಂಡಿಯಾ (ಎಆರ್‌ಎಐ) ಸಂಸ್ಥೆ ಸ್ಥಾಪಿಸಲು ಜಾಗ ಕೊಡುವಂತೆ ನನ್ನ ಇಲಾಖೆಯಿಂದಲೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಇದರಲ್ಲಿ ಅನವಶ್ಯ ರಾಜಕೀಯ ಅಗತ್ಯ ಇಲ್ಲ. ಜಿಲ್ಲೆಯ ಅಭಿವೃದ್ಧಿ ಎಲ್ಲರ ಜವಾಬ್ದಾರಿ. ಜಿಲ್ಲಾಧಿಕಾರಿಗಳು ಜಾಗ ಇಲ್ಲ ಎಂದು ಹೇಳಿದ್ದರು. ಶಾಸಕರಿಗೆ ಜಾಗ ಕೊಡುವ ಅವಕಾಶ ಇದೆಯೇ? ಇದೇ ವಿಚಾರ ಇಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಬೇಡ ಅಂತಾರೆ
ಇತ್ತೀಚೆಗೆ ಅಪರೂಪದ ಅಯಸ್ಕಾಂತ (ರೇರ್ ಅರ್ಥ್ ಮ್ಯಾಗ್ನೆಟಿಕ್) ಕಾರ್ಖಾನೆ ಸ್ಥಾಪಿಸಲು ಕರ್ನಾಟಕದವರೇ ಪ್ರಸ್ತಾಪ ಸಲ್ಲಿಸಿದ್ದರು. ಅವರು ನನ್ನಲ್ಲಿಗೆ ಬಂದಿದ್ದರು. ಮಂಡ್ಯದಲ್ಲೇ ಒಂದು ಕೈಗಾರಿಕೆ ಸ್ಥಾಪಿಸುವಂತೆ ಕೇಳಿದರೆ ಕರ್ನಾಟಕದಲ್ಲಿ ಬೇಡ ಅಂತಾರೆ. ಕರ್ನಾಟಕದ ಸರ್ಕಾರ ಬೆಂಬಲ ಕೊಡಲ್ಲ ಎಂದು ದೂರುತ್ತಾರೆ. ವಿಶಾಖಪಟ್ಟಣದಲ್ಲಿ ಜಾಗ ಕೊಡಿಸಿ ಎಂದು ಕೇಳುತ್ತಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಇಂಥ ಕೆಟ್ಟ ಪರಿಸ್ಥಿತಿ ಸೃಷ್ಟಿ ಮಾಡಿದ್ದು ಯಾರು? ಸರ್ಕಾರ ಅಲ್ಲವೇ? ಇವರಿಗೆ ಅಭಿವೃದ್ಧಿ ಬೇಕಿಲ್ಲ. ರಾಜ್ಯ ಸರ್ಕಾರದ ಯಾವೊಬ್ಬ ಸಚಿವರೂ ಅಭಿವೃದ್ಧಿ ವಿಚಾರವಾಗಿ ನನ್ನೊಂದಿಗೆ ಚರ್ಚಿಸಿಲ್ಲ. ಕೈಗಾರಿಕೆ ಅಷ್ಟೇ ಅಲ್ಲ, ಬೇರೆ ಯಾವ ಅಭಿವೃದ್ಧಿ ಕೆಲಸಕ್ಕೂ ಕೂಡ ನಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿಲ್ಲ ಎಂದು ಅವರು ಕಿಡಿಕಾರಿದರು.

ಮಂಡ್ಯಕ್ಕೆ ಕೈಗಾರಿಕೆ ತರಲು ಎಷ್ಟು ಶ್ರಮ ಹಾಕುತ್ತಿದ್ದೇನೆ ಎನ್ನುವುದು ನನಗೆ ಮಾತ್ರ ಗೊತ್ತು. ರಾಜಕೀಯವಾಗಿ ಟೀಕೆ ಸಾಮಾನ್ಯ. ಮಂಡ್ಯ ಜಿಲ್ಲೆಗೆ ಒಳ್ಳೆಯದಾಗಬೇಕು ಎಂದರೆ ಜಾತ್ಯತೀತ ಜನತಾದಳವನ್ನು ಒದ್ದೊಡಿಸಬೇಕು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಯಾರನ್ನು ಒದ್ದೋಡಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಹರಿಹಾಯ್ದರು.

ಇದು ಬ್ರೋಕರ್ ಸರ್ಕಾರ
ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಪರ ಇಲ್ಲ. ದಲ್ಲಾಳಿಗಳಿಗೆ ಲಾಭ ಮಾಡಿಕೊಡುವ ಬ್ರೋಕರ್ ಸರ್ಕಾರ ಇದಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ರೈತರು ಹೆಚ್ಚು ಬೆಳೆ ಬೆಳೆದಾಗ ಸರ್ಕಾರ ಖರೀದಿ ಕೇಂದ್ರ ತೆರೆಯಲ್ಲ. ಅಂಥ ಸಂದರ್ಭದಲ್ಲಿ ಬೆಲೆ ಕುಸಿತ ಆಗುತ್ತದೆ. ಖಾಸಗಿಯವರು ಬಂದು ಎಲ್ಲ ಬೆಳೆಯನ್ನೂ ಅಗ್ಗದ ಬೆಲೆಗೆ ಖರೀದಿಸಿದ ಮೇಲೆ ಖರೀದಿ ಕೇಂದ್ರಗಳನ್ನು ತೆರೆಯುತ್ತದೆ. ಆಗ ಈ ದಲ್ಲಾಳಿಗಳಿಗೆ ಹೆಚ್ಚಿನ ಬೆಲೆಗೆ ಆ ಬೆಳೆ ಮಾರಾಟ ಮಾಡುತ್ತಾರೆ. ಯಾವಾಗಲೂ ಹೀಗೆಯೇ ಆಗುತ್ತದೆ. ರೈತರ ಹತ್ತಿರ ಮಾಲು ಇದ್ದಾಗ ಸರ್ಕಾರ ಖರೀದಿಸಿಲ್ಲ. ರೈತರು ಸಂಕಷ್ಟಕ್ಕೆ ಸಿಲುಕಿ, ಬೆಳೆ ಮಾರಾಟ ಮಾಡಿದ ಮೇಲೆ ಖರೀದಿ ಕೇಂದ್ರ ತೆರೆಯುತ್ತಾರೆ. ಇದು ಬ್ರೋಕರ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಜರಿದ್ದರು.

 

Tags:
error: Content is protected !!