ಮಂಡ್ಯ: ಜೆಡಿಎಸ್ ಯುವ ಘಟಕದ ಅಧಕ್ಷ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಹಾಗೂ ಸಿನಿಮಾ ರಂಗ ಎರಡರಲ್ಲೂ ತೊಡಗಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ರಾಜಕೀಯದಲ್ಲಿ ಹೆಚ್ಚು ಒಲುವು ತೋರಿಸಿ, ಎರಡು ಚುನಾವಣೆಗಳನ್ನು ಎದುರಿಸಿದ್ದರು. ಆದರೆ ಆ ಚುನಾವಣೆಗಳು ಅವರ ಕೈಹಿಡಿಯಲಿಲ್ಲ. ಹೀಗಾಗಿ ನಿಖಿಲ್ ಸಿನಿಮಾ ರಂಗಕ್ಕೆ ಹೋಗುತ್ತಾರೆ ಅಥವಾ ರಾಜಕೀಯದಲ್ಲೇ ಉಳಿದುಕೊಳ್ಳುತ್ತಾರಾ ಎನ್ನುವ ಅನುಮಾನವಿತ್ತು. ಈ ಬಗ್ಗೆ ನಿಖಿಲ್ ಅವರೇ ಮಂಡ್ಯದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಈ ಸುದ್ದಿಗೋಷ್ಠಿಯಲ್ಲಿ ಅವರು ಚಿತ್ರರಂಗ ತೊರೆಯುವ ಬಗ್ಗೆ ಪರೋಕ್ಷವಾಗಿ ಮಾತನಾಡಿ, ಸಿನಿಮಾ ಮಾಡೋದನ್ನು ನಿಲ್ಲಿಸಿದ್ದೇನೆ. ಪಕ್ಷ ಕಟ್ಟುವ ಜವಾಬ್ದಾರಿ ನನ್ನ ಮೇಲಿದೆ. ನಾನು ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೋಡುತ್ತೇನೆ ಎಂದಿದ್ದಾರೆ.
ನಾನು ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ. ನಾನು ಈಗ ಫುಲ್ ಟೈಮ್ ರಾಜಕಾರಣಿ ಎಂದು ನಿಖಿಲ್ ಘೋಷಿಸಿದ್ದಾರೆ. ಈ ಮೂಲಕ ಅವರು ಚಿತ್ರ ರಂಗಕ್ಕೆ ಗುಡ್ ಬೈ ಹೇಳುತ್ತಾರಾ? ಎಂದು ಕಾದು ನೋಡಬೇಕಿದೆ.