ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಸುಮಾರು 26 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಏಕಶಿಲೆಯಲ್ಲಿ ಬಾಲರಾಮನ ಪ್ರತಿಮೆ ಕೆತ್ತಿರುವ ಶಿಲ್ಪಿ ಅರುಣ್ ಯೋಗಿ ಅವರಿಗೆ ಜವಾಬ್ದಾರಿ ನೀಡಿದ್ದಾರೆ.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಶಿಲ್ಪಿ ಅರುಣ್ ಯೋಗಿ ಅವರೊಂದಿಗೆ ಸ್ಥಳ ಪರಿಶೀಲಿಸಿದ ಶಾಸಕ ಪಿ.ರವಿಕುಮಾರಗೌಡ ಅವರು, ಮಂಡ್ಯ ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಸುಮಾರು 200 ಕೋಟಿ ರೂ.ಗಳನ್ನು ನೀಡಲಾಗಿದ್ದು, ಕೆಂಪೇಗೌಡ ಪ್ರತಿಮೆಯನ್ನು 2 ಕೋಟಿ ರೂ.ಗಳಲ್ಲಿ ನಿರ್ಮಾಣ ಮಾಡಲಾಗುವುದು. ಅದರ ಜವಾಬ್ದಾರಿಯನ್ನು ಶಿಲ್ಪಿ ಅರುಣ್ ಯೋಗಿ ಅವರಿಗೆ ವಹಿಸಲಾಗಿದೆ ಎಂದರು.
ಕೆಂಪೇಗೌಡರ ಪ್ರತಿಮೆಯಿಂದ ಮಂಡ್ಯಕ್ಕೆ ಹೊಸ ರೂಪ ಬರಲಿದೆ. ಹೊಸ ಮಂಡ್ಯ ಕಟ್ಟುವ ಮಾತು ಕೊಟ್ಟಿದ್ದೆ. ಅದೇ ರೀತಿ ಹೊಸ ಸ್ಪರ್ಶ ಕೊಡುತ್ತಿದ್ದೇನೆ. ಮಂಡ್ಯ ನಗರ ಗುಂಡಿ ಮುಕ್ತ ನಗರವನ್ನಾಗಿ ಮಾಡಲಾಗುವುದು ಎಂದು ಹೇಳಿದರು.
ಶಿಲ್ಪಿ ಅರುಣ್ ಯೋಗಿ ಅವರು ಮಾತನಾಡಿ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಮಹಾನ್ ನಾಯಕರ ಪ್ರತಿಮೆ ಕೆತ್ತನೆ ಮಾಡಲು ಶಾಸಕ ಪಿ. ರವಿಕುಮಾರ್ ಅವರು ನನಗೆ ವಹಿಸಿದ್ದಾರೆ. ಅವರ ನಿರೀಕ್ಷೆಯಂತೆ ಸುಂದರವಾದ ಪ್ರತಿಮೆಯನ್ನು ನಿರ್ಮಿಸಿಕೊಡುತ್ತೇನೆ ಎಂದರು.
ನಮ್ಮ ತಾಯಿ ಸಹ ಮಂಡ್ಯ ತಾಲ್ಲೂಕು ಮುಟ್ಟನಹಳ್ಳಿ ಗ್ರಾಮದವರು. ಈ ಹಿನ್ನೆಲೆಯಲ್ಲಿ ಮಂಡ್ಯ ಎಂದರೆ ನನಗೆ ವಿಶೇಷ ಅಭಿಮಾನ. ಅಚ್ಚುಕಟ್ಟಾಗಿ ಹಾಗೂ ಜವಾಬ್ದಾರಿಯುತವಾಗಿ ನಾನು ಕೆಲಸ ಮಾಡುತ್ತೇನೆ. ಮಹಾನ್ ನಾಯಕರಿಗೆ ಇತಿಹಾಸ ಇದೆ, ಆ ಇತಿಹಾಸ ತಿಳಿದು ನಾಯಕರ ಪ್ರತಿಮೆ ಕೆತ್ತನೆ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭ ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ನಗರಸಭೆ ಮಾಜಿ ಸದಸ್ಯ ಕೆ.ಸಿ. ರವೀಂದ್ರ ಇತರರಿದ್ದರು.




