ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದಲ್ಲಿ ಬೆಲೆ ಏರಿಕೆ ಬೆನ್ನಲ್ಲೇ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ರಾಜ್ಯ ಸರ್ಕಾರ ಬರ ಪರಿಹಾರ ಹಣವನ್ನೂ ಕೂಡ ಸರಿಯಾಗಿ ನೀಡಿಲ್ಲ. ಇದರಿಂದ ಅನ್ನದಾತರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನನಗೆ ನೋವಿದೆ, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಇದು ನನ್ನ ಮನಸ್ಸಿನ ನೋವನ್ನು ಹೆಚ್ಚಿಸಿದೆ. ಕೇಂದ್ರ ಸಚಿವನಾದ ನಂತರ ಮಂಡ್ಯದಲ್ಲಿ ಜನತಾ ದರ್ಶನ ಮಾಡಿದೆ. ಬೆಳಿಗ್ಗೆ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಅರ್ಜಿ ಸ್ವೀಕಾರ ಮಾಡಿದ್ದೇನೆ. 400 ಕ್ಕೂ ಹೆಚ್ಚು ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು, ಆರ್ಥಿಕ ನೆರವಿಗೆ ಕೋರಿ 300ಕ್ಕೂ ಹೆಚ್ಚು ಅರ್ಜಿ, ನಿರುದ್ಯೋಗ ಸಮಸ್ಯೆ ಕುರಿತ 300ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಜೊತೆಗೆ ನಿವೇಶನ, ಮನೆಗಳ ಬೇಡಿಕೆ ಇರುವ ಅರ್ಜಿಗಳು ಕೂಡ ಬಂದಿವೆ.
ಆರ್ಥಿಕ ನೆರವಿಗೆ ಬಂದು ಅರ್ಜಿ ಕೊಡುವವರು ನಿರಾಸೆ ಆಗಬೇಡಿ. ಯಾರಾದರೂ ಕಷ್ಟ ಹೇಳಿಕೊಂಡು ಬಂದಾಗ ನನ್ನಲ್ಲಿ ಇದ್ದರೂ, ಇಲ್ಲದಿದ್ರೂ ಕೈಲಾದ ಸಹಾಯ ಮಾಡಿದ್ದೇನೆ. ಮನೆ ಕಟ್ಟಲೋ, ಕೃಷಿ ಭೂಮಿ ಅಭಿವೃದ್ಧಿಗೆ ಬ್ಯಾಂಕ್ ಸಾಲ ಮಾಡಿ ನನ್ನನ್ನು ತೀರಿಸು ಎಂದರೆ ಎಲ್ಲಿ ಆಗುತ್ತದೆ. ಆ ಸಾಲ ತೀರಿಸಲು ಮುಂದೆ ದೇವರು ಶಕ್ತಿ ಕೊಡುತ್ತಾನೆ. ಈ ಬಗ್ಗೆ ನನಗೆ ನಂಬಿಕೆಯಿದೆ ಎಂದು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವ ಮುನ್ಸೂಚನೆ ನೀಡಿದರು.