Mysore
27
overcast clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಹೃದಯಕ್ಕೆ ಹಿಡಿಸುವ ಭಾಷೆ ಕನ್ನಡ: ನ್ಯಾ. ಇ.ಎಸ್‌ ಇಂದ್ರೇಶ್

ಮಂಡ್ಯ: ನಮಗೆ ಎಷ್ಟೇ ಭಾಷೆ ಗೊತ್ತಿದ್ದರೂ ನಮ್ಮ ಮಾತೃ ಭಾಷೆ‌ ಕನ್ನಡದಲ್ಲಿ ಮಾತನಾಡಿದಾಗಲೇ ಭಾಷೆ ಹೃದಯಕ್ಕೆ ಹಿಡಿಸುವುದು ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ.ಎಸ್ ಇಂದ್ರೇಶ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ʻನಾವಾಡುವ ನುಡಿಯೇ ಕನ್ನಡ ನುಡಿʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮನೆಯಲ್ಲಿಯೂ ಕನ್ನಡ ಭಾಷೆಯಲ್ಲಿಯೇ ಮಾತನಾಡಿ, ಕನ್ನಡ ಪತ್ರಿಕೆಗಳನ್ನು ಓದಿ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ಪ್ರತಿ ಮನೆಯ ಮಕ್ಕಳಿಗೂ ತಿಳಿಸಬೇಕು. ಈ ಮೂಲಕ ಕನ್ನಡ ಕಂಪಿನ ಬಗ್ಗೆ ಯುವ ಸಮೂಹದಲ್ಲಿ ಜ್ಞಾನ ವೃದ್ಧಿ ಮಾಡಬೇಕು ಎಂದರು.

ಮಂಡ್ಯ ಜನತೆ ಪ್ರೀತಿ ವಿಶ್ವಾಸದಲ್ಲಿ ಮೇಲುಗೈ ಸಾಧಿಸಿರುವವರು. ಅಪ್ಪಟ ಕನ್ನಡಾಭಿಮಾನವನ್ನು ಹೊಂದಿರುವ ನೆಲದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನ ಐಕ್ಯತೆಯ ಸಂಕೇತ
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಡಿಸೆಂಬರ್ 20,21,22ರಂದು ಮೂರು ದಿನಗಳ ಕಾಲ ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡದ ಐಕ್ಯತೆಯ ಸಂಕೇತವಾಗಿದೆ ಎಂದು ಹೇಳಿದರು.

ಈ ಸಾಹಿತ್ಯ ಸಮ್ಮೇಳನ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬರ ಮನ-ಮನೆಯ ಹಬ್ಬವಾಗಿದೆ. ಹೀಗಾಗಿ ಎಲ್ಲರೂ ಒಟ್ಟಿಗೆ ಸೇರಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸೋಣ ಎಂದು ನುಡಿದರು.

ದೇಸಿ ಸಾಹಿತ್ಯ ಇಂದಿಗೂ ಕೂಡ ಉಳಿದಿದೆ ಎಂದರೆ ಅದಕ್ಕೆ ಮೂಲ ಕಾರಣ ಜಿಲ್ಲೆಯ ಜನತೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿರುವುದು ಜಿಲ್ಲೆಯಲ್ಲಿಯೇ. ಹೀಗಾಗಿ, ಈ ಬಾರಿಯ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಜನತೆಯ ಸಹಕಾರದಿಂದ ಅತ್ಯಂತ ಸಂತೋಷದ ವಿಜ್ರಂಭಣೆಯಿಂದ ಆಚರಿಸೋಣ ಎಂದು ಕರೆ ನೀಡಿದರು.

ಕಪ್ಪು ಮಣ್ಣಿನ ವೈವಿಧ್ಯಮಯ ರಾಜ್ಯವಾದ ಕರ್ನಾಟಕದಲ್ಲಿ ನಾವೆಲ್ಲರೂ ಜನಿಸಿರುವುದೇ ಪುಣ್ಯ. ಕನ್ನಡವನ್ನು ಮಾತೃ ಭಾಷೆಯನ್ನಾಗಿ ಮಾಡಿಕೊಂಡು ನಮ್ಮ ಹೃದಯದವನ್ನು ಸಹ ಹಸನುಗೊಳಿಸಿಕೊಂಡಿದ್ದೇವೆ. ಕನ್ನಡ ಸಾಹಿತ್ಯ ಸಂಗೀತದ ಮಜಲುಗಳನ್ನು ಹುಟ್ಟುಹಾಕಿದೆ. ಹೀಗಾಗಿ ಎಲ್ಲರೂ ಕನ್ನಡದಲ್ಲಿಯೇ ವ್ಯವಹರಿಸಿ. ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಯಲ್ಲಿಯೇ ಪ್ರತಿಕ್ರಿಯೆ ನೀಡಿ ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾಡೋಜ ಮಹೇಶ್‌ ಜೋಶಿ ಹೇಳಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀರಂಗಪಟ್ಟಣ ಶ್ರೀ ಕ್ಷೇತ್ರ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ಬೆಂಗಳೂರು ಪೊಲೀಸ್ ಹೆಚ್ಚುವರಿ ಮಹಾ ನಿರ್ದೇಶಕ ನಂಜುಂಡಸ್ವಾಮಿ, ಕೇಂದ್ರ ವಲಯ ಇನ್ಸ್ಪೆಕ್ಟರ್ ಬಿ.ಆರ್ ರವಿಕಾಂತೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹಿರಿಯ ಸಾಹಿತಿ ಕೆ. ಸತ್ಯನಾರಾಯಣ, ಮೈಸೂರು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪದ್ಮ ಶೇಖರ್, ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ನಿವೃತ್ತ ಕನ್ನಡ ಪ್ರಾಧ್ಯಾಪಕ ಮತ್ತು ಕನ್ನಡ ವಾಗ್ಮಿ ಪ್ರೊ.ಎಂ. ಕೃಷ್ಣಗೌಡ, ಚಲನಚಿತ್ರ ಗೀತಾ ರಚನಕಾರರು ಮತ್ತು ನಿರ್ದೇಶಕರಾದ ಕವಿರತ್ನ ಡಾ.ವಿ.ನಾಗೇಂದ್ರ ಪ್ರಸಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!