ಮಂಡ್ಯ : ಸಂಸದ ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಮಂತ್ರಿಯಾಗಿರುವುದರಿಂದ ರಾಷ್ಟ್ರದ ಕೈಗಾರಿಕಾ ಸಂಸ್ಥೆಗಳಿಂದ ಅವರಿಗೆ ಸಿ.ಆರ್.ಎಸ್ ಅನುದಾನ ಬರುತ್ತದೆ. ಅದನ್ನಲ್ಲೆ ಬಳಸಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೈಷುಗರ್ ಶಾಲೆಗೆ 25 ಕೋಟಿ ಕೊಡಿಸುವುದಾಗಿ ಪತ್ರಿಕಾಗೋಷ್ಠಿ ಕರೆದು ಹೇಳಿದರು. ಆದರೆ ಇನ್ನೂ ಹಣ ಬಿಡುಗಡೆ ಗೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ಲೋಕಸಭಾ ಸದಸ್ಯರಾಗಿ ಮಂಡ್ಯ ಜಿಲ್ಲೆಗೆ ಒಂದುವರೆ ತಿಂಗಳಿಂದಲೂ ಬಂದಿಲ್ಲ. ನಾವು ಅವರ ಆರೋಗ್ಯ ಚನ್ನಾಗಿರಲಿ ಎಂದು ಆಶಿಸುತ್ತೇವೆ. ಪಾರ್ಲಿಮೆಂಟ್ ಗಳಿಗೆ ಹೋಗುತ್ತಾರೆ. ಪ್ರಧಾನ ಮಂತ್ರಿ ಮೋದಿ ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಆದರೆ ಮಂಡ್ಯ ಗೆ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದರು.
ಮಂಡ್ಯಗೆ ರಿಂಗ್ ರೋಡ್
ಮಂಡ್ಯದಲ್ಲಿ ರಿಂಗ್ ರೋಡ್ ಮಾಡಲು ಜಾಗ ಇನ್ನೂ ಅಂತಿಮವಾಗಿರುವುದಿಲ್ಲ. ಮಂಡ್ಯ ಮತ್ತು ಶ್ರೀರಂಗಪಟ್ಟಣ ಎರಡಕ್ಕೂ ಈ ಯೋಜನೆ ಸಂಬಂಧ ಪಟ್ಟಿರುವುದರಿಂದ ಇಬ್ಬರೂ ಶಾಸಕರೊಂದಿಗೆ ಚರ್ಚಿಸಿ ಮುಡಾ ಆಯುಕ್ತರು ಹಾಗೂ ಸಂಬಂಧಪಟ್ಟ ಪಂಚಾಯಿತಿಗಳನ್ನು ಕರೆದು ತೀರ್ಮಾನ ಕೈಗೊಳ್ಳಲಾಗುವುದು. ಸಂಸದ ಎಚ್.ಡಿ ಕುಮಾರಸ್ವಾಮಿ ಅವರು ರಿಂಗ್ ರೋಡ್ ನಿರ್ಮಾಣಕ್ಕೆ 900 ಕೋಟಿ ಅನುದಾನ ಕೊಡಿಸುವುದಾಗಿ ಹೇಳಿದ್ದಾರೆ. ಅವರು ಅನುದಾನ ನೀಡಿದರೆ ಮಂಡ್ಯದ ಸಂಜಯ್ ವೃತ್ತದಲ್ಲಿ ಸನ್ಮಾನ ಮಾಡೋಣ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ.ಉದಯ್ , ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




