ಮಂಡ್ಯ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಸಾಂವಿಧಾನಿಕವಾಗಿ ಕಾನೂನು ರೂಪಿಸುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿದೆ ಎಂದು ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕರಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಸೋಮವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರಗಳು ಇದುವರೆಗೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಸಾಂವಿಧಾನಿಕವಾಗಿ ಕಾನೂನು ರೂಪಿಸಿ ವಿಧಾನ ಮಂಡಲದಲ್ಲಿ ಕಾಯಿದೆಯಾಗಿ ಜಾರಿಗೆ ತರುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು.
ರಾಜ್ಯದ ನೆಲ, ಜಲ, ಸರ್ಕಾರದ ತೆರಿಗೆ ವಿನಾಯಿತಿಯಂತಹ ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿರುವ ಖಾಸಗಿ ಹೂಡಿಕೆದಾರರು, ಬಂಡವಾಳಗಾರರು, ಎಲ್ಲಾ ಉದ್ಯಮಗಳು, ಕೈಗಾರಿಕೆಗಳು, ಉದ್ಯೋಗ ದಕ್ಕಬೇಕಾದರೆ ಡಾಕ್ಟರ್ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಆದರೆ ಇಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಕಾಲದಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮಾನದಂಡ ಕಾವೇರಿ ಸಂಕಷ್ಟ ಸೂತ್ರ ರಚಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ಮತ್ತು ನೀರು ನಿರ್ವಹಣ ಪ್ರಾಧಿಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು .
ಉಮ್ಮಡಹಳ್ಳಿ ನಾಗೇಶ್, ಆರಾಧ್ಯ, ಶಿವಕುಮಾರ್, ಸಲ್ಮಾನ್ ಉಪಸ್ಥಿತರಿದ್ದರು.