ನಾಗಮಂಗಲ : ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸುಮಾರು 300 ಎಕರೆ ಸರ್ಕಾರಿ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಆರು ಮಂದಿ ಸರ್ಕಾರಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ನಾಗಮಂಗಲ ತಹಸಿಲ್ದಾರ್ ಮತ್ತು ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಶೋಧನಾ ವಾರೆಂಟ್ ಹೊರಡಿಸಿ, ತನಿಖೆಗೆ ಆದೇಶ ನೀಡಿದ್ದರು. ಶೋಧನೆ ಮಾಡಿದ ನಂತರ 11 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಲೋಕಾಯುಕ್ತ ಅಧಿಕಾರಿಗಳು ತಾಲ್ಲೂಕು ಕಚೇರಿ, ಆರೋಪಿಗಳ ಮನೆಗಳು ಸೇರಿದಂತೆ ಏಳು ಕಡೆಗಳಲ್ಲಿ ಮಂಗಳವಾರ ಏಕಕಾಲದಲ್ಲಿ ದಾಳಿ ನಡೆಸಿದ್ದರು.
ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಯೋಗೇಶ್, ಹಾಗೂ ಕಾಂತಾಪುರ ವೃತ್ತದ ಗ್ರಾಮ ಸಹಾಯಕ ಎಸ್.ಯೋಗೇಶ್, ಶಿರಸ್ತೇದಾರ್ ಉಮೇಶ್, ಎಂಬ ಸರ್ಕಾರಿ ನೌಕರರ ಜೊತೆಗೆ ಯಶವಂತ್, ಚಿನ್ನಸ್ವಾಮಿ, ವಿಜಯಕುಮಾರ್, ನಾಗಮಂಗಲ ಪಟ್ಟಣವಾಸಿ ವಸೀಂ ಉಲ್ಲಾಖಾನ್ ಬಿನ್ ಕಲೀಂಉಲ್ಲಾ ಎಂಬ ಖಾಸಗಿ ವ್ಯಕ್ತಿ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನಾಗರಿಕ ಸಂಹಿತೆ ಕಲಂ ೬೧ (೨), ೩೧೮(೪), ೩೩೫, ೩೩೬(೩), ೩೪೦(೨), ೩೦೩(೨), ೩೧೬(೫)ರ ಅಡಿಯಲ್ಲಿ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಲ್ಲರನ್ನೂ ಬಂಽಸಲಾಗಿದೆ. ಜೆಎಂಎಫ್‌ಸಿ ನ್ಯಾಯಾಲಯವು ಸದರಿ ಆರೋಪಿಗಳನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿರುತ್ತದೆ.
ದರಖಾಸ್ತು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್, ಭೂ ದಾಖಲೆಗಳ ವಿಭಾಗದ ದ್ವಿತೀಯ ದರ್ಜೆ ಸಹಾಯಕರಾದ ಯೋಗೇಶ್, ಗುರುಮೂರ್ತಿ, ವಿಜಯಕುಮಾರ್ ಅವರುಗಳನ್ನು ಜಿಲ್ಲಾಧಿಕಾರಿ ಅಮಾನತ್ತುಗೊಳಿಸಿದ್ದು, ದೇವಲಾಪುರ ನಾಡ ಕಛೇರಿ ಉಪ ತಹಸಿಲ್ದಾರ್ ರವಿಶಂಕರ್, ರೆಕಾರ್ಡ್ ರೂಂ ಶಿರಸ್ತೆದಾರ್ ಹೆಚ್.ಎಸ್.ಉಮೇಶ್ ಅವರನ್ನು ಪ್ರಾದೇಶಿಕ ಆಯುಕ್ತರು ಅಮಾನತ್ತುಗೊಳಿಸಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.
ಕಾಂತಾಪುರ ಗ್ರಾಮ ಸಹಾಯಕ ಎಸ್.ಯೋಗೇಶ್‌ನನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಗ್ರಾಮ ಸಹಾಯಕ ಹುದ್ದೆಯ ಕರ್ತವ್ಯದಿಂದ ಬಿಡುಗಡೆಗೊಳಿಸಿರುತ್ತಾರೆ. ಸರ್ಕಾರಿ ದಾಖಲೆಗಳನ್ನು ಸಂರಕ್ಷಿಸಬೇಕಾದ ನಾಗಮಂಗಲ ತಾಲ್ಲೂಕು ತಹಸಿಲ್ದಾರ್, ಅಧೀನ ಸಿಬ್ಬಂದಿಗೆ ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿ ಕರ್ತವ್ಯ ಲೋಪವೆಸಗಿರುವ ಹಿನ್ನಲೆಯಲ್ಲಿ ತಹಸಿಲ್ದಾರ್ ಅವರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಮತ್ತೊಬ್ಬನ ಬಂಧನ
ನಕಲಿ ದಾಖಲೆ ಸೃಷ್ಟಿ ಸಿ ಭೂಮಿ ಕಬಳಿಸಿರುವ ಪ್ರಕರಣಕ್ಕೆ ಸಂಬಂಽಸಿದಂತೆ ನಾಗಮಂಗಲ ಪಟ್ಟಣ ಪೋಲಿಸರು ಮತ್ತೊಬ್ಬ ಆರೋಪಿ ಬಂಧಿಸಿದ್ದಾರೆ. ವಿಜಯಕುಮಾರ್ ಬಂಧಿತ ಆರೋಪಿಯಾಗಿದ್ದು, ಈತ ತಹಸಿಲ್ದಾರ್ ಕಚೇರಿಯಲ್ಲಿ ಎಲ್.ಎನ್.ಡಿ ಶಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ.




