ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ ಮೊದಲ ಸಾರ್ವಜನಿಕ ವಿದ್ಯುತ್ ವಾಹನಗಳ ಫಾಸ್ಟ್ ಚಾರ್ಜಿಂಗ್ ಕೇಂದ್ರವನ್ನು ಆರಂಭಿಸಿದೆ.
ಸೆಸ್ಕ್ ಮಂಡ್ಯ ವೃತ್ತ ಕಚೇರಿ ಆವರಣದಲ್ಲಿ ಪ್ರಾರಂಭಿಸಿರುವ ನೂತನ ಹಾಗೂ ಜಿಲ್ಲೆಯ ಮೊದಲ ಸಾರ್ವಜನಿಕ ವಿದ್ಯುತ್ ವಾಹನಗಳ ಫಾಸ್ಟ್ ಚಾರ್ಜಿಂಗ್ ಕೇಂದ್ರವನ್ನು ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಕುಮಾರ್ ಹಾಗೂ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ.ಮುನಿಗೋಪಾಲ್ ರಾಜು ಅವರು ಗುರುವಾರ ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಶಾಸಕ ರಮೇಶ್‌ಬಾಬು ಬಂಡಿಸಿದ್ದೇಗೌಡ ಅವರು, ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ತಡೆಗಟ್ಟಲು ಹಾಗೂ ಇಂಧನದ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಇವಿ ವಾಹನಗಳ ಬಳಕೆ ಅತ್ಯಂತ ಸಹಕಾರಿಯಾಗಿದೆ. ಇದಕ್ಕಾಗಿ ಸೆಸ್ಕ್ ವತಿಯಿಂದ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಮೂಲಕ ಹಸಿರು ಶಕ್ತಿಯ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಸಸ್ಕ್ ವ್ಯವಸ್ಥಾಪಕ ನಿರ್ದೇಶಕ ಮುನಿಗೋಪಾಲ್ ಮಾತನಾಡಿ, ಕೆಲವು ದಿನಗಳ ಹಿಂದಷ್ಟೇ ಮೈಸೂರಿನಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಇವಿ ಫಾಸ್ಟ್ ಚಾರ್ಜಿಂಗ್ ಹಬ್ ಪ್ರಾರಂಭಿಸಲಾಗಿತ್ತು. ಇದೀಗ ಮಂಡ್ಯ ನಗರದಲ್ಲಿ ಸಾರ್ವಜನಿಕರ ಬಳಕೆಗೆ ಮೊದಲ ಇವಿ ಫಾಸ್ಟ್ ಚಾರ್ಜಿಂಗ್ ಘಟಕ ಆರಂಭಿಸಿದ್ದು, ಇದರಿಂದ ಇವಿ ವಾಹನಗಳ ಬಳಕೆದಾರರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಇತರೆ ಕಡೆಗಳಲ್ಲಿ ಹೆಚ್ಚಿನ ಇವಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿ, ಇವಿ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದರು.
ಇವಿ ಕೇಂದ್ರದ ವಿಶೇಷತೆಗಳು
ಮಂಡ್ಯ ವೃತ್ತ ಕಚೇರಿ ಆವರಣದಲ್ಲಿ ಆರಂಭಿಸಿರುವ ಇವಿ ಫಾಸ್ಟ್ ಚಾರ್ಜಿಂಗ್ ಘಟಕದಲ್ಲಿ 3 ನಾಲ್ಕು ಚಕ್ರ ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಕೇಂದ್ರದಲ್ಲಿ ಪ್ರಸ್ತುತ 30 ಕೆವಿ ಡಿಸಿ ಚಾರ್ಜರ್ ಮತ್ತು 7.4 ಕೆವಿ ಎಸಿ ಚಾರ್ಜರ್‌ಗಳಿದ್ದು, ಭವಿಷ್ಯದಲ್ಲಿ ಇದನ್ನು 240 ಕೆವಿ ಸೂಪರ್ ಫಾಸ್ಟ್ ಚಾರ್ಜಿಂಗ್ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬಹುದಾಗಿದೆ. ಸಾವರ್ಜನಿಕರು Instacharge ಆಪ್ ಬಳಸಿಕೊಂಡು ಈ ವಿದ್ಯುತ್ ವಾಹನಗಳ ಫಾಸ್ಟ್ ಚಾರ್ಜಿಂಗ್ ಕೇಂದ್ರದಲ್ಲಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಬಹುದು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಡಿ.ಜೆ.ದಿವಾಕರ್, ಮುಖ್ಯ ಇಂಜಿನಿಯರ್ ಮೃತ್ಯುಂಜಯ ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.




