ಮಂಡ್ಯ: ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಲುಪಿಸುವ ಕೆಲಸವನ್ನು ಗಾಂಧಿ ಭವನದಲ್ಲಿ ಮಾಡಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಇಂದು ಮಂಡ್ಯ ತಾಲ್ಲೂಕಿನ ಬಿ.ಹೊಸುರು ಗ್ರಾಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಿರ್ಮಿಸಲಾಗಿರುವ ಗಾಂಧಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, 2016-17 ನೇ ಸಾಲಿನಲ್ಲಿ ಆಯವ್ಯಯ ಘೋಷಣೆಯನ್ವಯ ದಿನಾಂಕ 23.02.2016ರಲ್ಲಿ ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಪ್ರಚುರಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರೂ.3.00 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಗಾಂಧಿ ಭವನ ನಿರ್ಮಾಣಕ್ಕೆ ಮಂಡ್ಯ ಜಿಲ್ಲೆಯ ಮಂಡ್ಯ ತಾಲೂಕಿನ ಕೆರಗೋಡು ಹೋಬಳಿಯ ಬಿ. ಹೊಸೂರು ಗ್ರಾಮದಲ್ಲಿ 36 ಗುಂಟೆ ಜಮೀನನ್ನು ಗಾಂಧಿ ಭವನ ನಿರ್ಮಾಣಕ್ಕಾಗಿ ಜಿಲ್ಲಾಡಳಿತದಿಂದ ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.
ಗಾಂಧಿ ಭವನ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು ಮಹಾತ್ಮ ಗಾಂಧಿ ಯವರ ಮೂರ್ತಿ, ಗ್ಯಾಲರಿಯಲ್ಲಿ ಭಾವಚಿತ್ರಗಳನ್ನು ಅಳವಡಿಸಿದ್ದು, ಗ್ರಂಥಾಲಯ, ವಾಚನಾಲಯ, ವಿವಿಧೋದ್ದೇಶ ಸಭಾಂಗಣ, ತರಬೇತಿ ಕೇಂದ್ರ, ಗಾಂಧಿಯವರ ಜೀವನದ ವಿವಿಧ ಹಂತಗಳ ಫೋಟೊ ಗ್ಯಾಲರಿ, 100 ಮಂದಿ ಕುಳಿತುಕೊಳ್ಳಬಹುದಾದ ಸಭಾಂಗಣ, ಸುಂದರ ಆಕೃತಿಗಳ ಒಳಾಂಗಣ, ಕಚೇರಿಯನ್ನು ಗಾಂಧಿ ಭವನ ಹೊಂದಿದೆ ಎಂದು ಹೇಳಿದರು.
ಗಾಂಧೀಜಿಯ ಚಿಂತನೆ, ತತ್ವ, ಆದರ್ಶ, ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸಲಾಗುವುದು. ಅವರ ಸರಳ ಜೀವನದ ಸಂದೇಶ, ಸತ್ಯಾಗ್ರಹ, ಗುಡಿ ಕೈಗಾರಿಕೆಗಳಿಗೆ ನೀಡಿದ ಪ್ರೋತ್ಸಾಹ, ಮಕ್ಕಳು, ಮಹಿಳೆಯರು, ಶೋಷಿತರು, ಹಿಂದುಳಿದ ವರ್ಗದವರ ಬಗೆಗೆ ಅವರಿಗಿದ್ದ ಕಾಳಜಿ-ತುಡಿತಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ.
ಗಾಂಧಿ ಭವನದಲ್ಲಿ ಕಾರ್ಯ ಚಟುವಟಿಕೆಗಳು ಹಾಗೂ ತರಬೇತಿಗಳನ್ನು ನಡೆಸಲಾಗುವುದು. ಕಾಲಕಾಲಕ್ಕೆ ಸಭೆ, ಸಮಾರಂಭಗಳನ್ನು ನಡೆಸಲಾಗುವುದು ಎಂದು ಹೇಳಿದರು.
ನಂತರ ಗಾಂಧಿ ಭವನದಲ್ಲಿ ಸಂಗ್ರಹಿಸಲಾಗಿರುವ ಛಾಯಾಚಿತ್ರಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಶೋಭಾರಾಣಿ ವಿ ಜೆ, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ ಗಂಗಾಧರ, ಸಣ್ಣ ಕೈಗಾರಿಕೆಗಳ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರಾದ ಟಿ ಕೆ ಹರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





