Mysore
14
few clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಸಾರ್ವಜನಿಕ ಸ್ಮಶಾನಗಳಲ್ಲಿ ಅಂತ್ಯಸಂಸ್ಕಾರಕ್ಕೆ ಮುಕ್ತ ಪ್ರವೇಶ : ಡಾ.ಕುಮಾರ

ಮಂಡ್ಯ: ಸರ್ಕಾರಿ ಸ್ಥಳಗಳಲ್ಲಿರುವ ಸ್ಮಶಾನಗಳಲ್ಲಿ ಎಲ್ಲಾ ಸಮುದಾಯದವರು ಯಾವುದೇ ಬೇಧ ಭಾವವಿಲ್ಲದೆ ಅಂತ್ಯಸಂಸ್ಕಾರ ಮಾಡಲು ಮುಕ್ತ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ  ಹೇಳಿದರು.

ಇಂದು (ಫೆ.24) ರಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕುಂದುಕೊರತೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶವಸಂಸ್ಕಾರವನ್ನು ಪ್ರತಿಯೊಬ್ಬರು ಗೌರವಯುತವಾಗಿ ಮಾಡಬೇಕು ಎಂದರು.

ಕೆ.ಆರ್. ಪೇಟೆಯ ಟೌನ್ ನಲ್ಲಿ ವಾಸಿಸುತ್ತಿರುವ 64 ಪೌರ ಕಾರ್ಮಿಕ ಕುಟುಂಬಗಳಿಗೆ ಒಂದು ವಾರದೊಳಗೆ ಹೊಸಹೊಳಲು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಲಭ್ಯವಿರುವ 7 ಎಕರೆ ಜಾಗವನ್ನು ಸರ್ವೆ ಮಾಡಿ, ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕೊಡಿಸುವ ಕಾರ್ಯ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕೆ‌ಆರ್.ಪೇಟೆ ತಾಲ್ಲೂಕಿನ ಬಿಂಡಿಗನವಿಲೆ, ಮಂಗರಹಳ್ಳಿಯಿಂದ ಹಿರಸಾವೆ ಗ್ರಾಮಕ್ಕೆ ಸುಮಾರು ವರ್ಷಗಳಿಂದಲೂ ರಸ್ತೆ ಕಿರಿದಾಗಿದೆ ಎಂಬ ಕಾರಣಕ್ಕೆ ಕೆ.ಎಸ್.ಆರ್.ಟಿಸಿ ಬಸ್ ಇರುವುದಿಲ್ಲ‌ಎಂಬ ದೂರು ಬಂದಿದ್ದು, ಕೆ.ಎಸ್.ಆರ್.ಟಿ.ಸಿ‌.ಯ ಅಧಿಕಾರಿಗಳು ಖುದ್ದು ಪರಿಶೀಲನೆ ನಡೆಸಿ ಬಸ್ ಗಳು ಚಲಿಸುವ ಸಾಧ್ಯತೆ ಇದ್ದಾರೆ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶಿಷ್ಟ ಜಾತಿ‌ ಮತ್ತು‌ ಪಂಗಡಕ್ಕೆ ಸೇರಿದ ಕುಂದು ಕೊರತೆಗಳು ಜಿಲ್ಲಾ ಮಟ್ಟದಲ್ಲಿ ಚರ್ಚೆ ಯಾಗುವ ವಿಷಯಗಳು ತಾಲ್ಲೂಕು ಮಟ್ಟದ ಸಭೆಯಲ್ಲಿ ಚರ್ಚೆ ನಡೆಸಿದರೆ ಸಮಸ್ಯೆಗಳನ್ನು ‌ಶೀಘ್ರವಾಗಿ ಪರಿಹರಿಸಬಹುದು ಎಂದರು.

ಪರಿಶಿಷ್ಟ‌ ಜಾತಿ ಹಾಗೂ ಪಂಗಡದವರು ತಮ್ಮ ಗ್ರಾಮದಲ್ಲಿ ಕೆರೆ, ರಸ್ತೆ ಹಾಗೂ ಸ್ಮಾಶನ ಅಭಿವೃದ್ಧಿ ಪಡಿಸಿಕೊಡಬೇಕು ಎಂದು ಕುಂದುಕೊರತೆ ಸಭೆಯಲ್ಲಿ ಅರ್ಜಿ ಸಲ್ಲಿಸಿದಾಗ ಇದನ್ನು ವಿಶೇಷವಾಗಿ ಪರಿಗಣಿಸಿ ನರೇಗಾ ಯೋಜನೆಯಡಿ ತಯಾರಿಸುವ ಕ್ರಿಯಾ ಯೋಜನೆಯಲ್ಲಿ ನಿಯಮಾನುಸಾರ‌ ಪರಿಶೀಲಿಸಿ ಪ್ರಥಮ ಆದ್ಯತೆ ನೀಡಿ ಸೇರಿಸಿಕೊಳ್ಳಿ ಎಂದರು.

ಸರ್ಕಾರದ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳನ್ನು ಹರಾಜು ಮಾಡುವಾಗ ಪೌರಕಾರ್ಮಿಕರಿಗೆ ಮೀಸಲಾತಿ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಚರ್ಚಿಸಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮ್ಯಾನುಯಲ್ ಸ್ಕ್ಯಾವೆಂಜರ್ ಗಳನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲು ಗ್ರಾಮ ಮಟ್ಟದಲ್ಲಿ ಸಭೆ ನಡೆಸಲು ಸೂಚನೆ ನೀಡಿ ಪಟ್ಟಿ‌ ಸಿದ್ಧಪಡಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಗ್ರಾಮದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಪಕ್ಕ ವಾಸವಿರುವ ದಲಿತ ಕುಟುಂಬದವರಿಗೆ ಪೌತಿ ಖಾತೆ ಮಾಡಿಕೊಡುವ ಬಗ್ಗೆ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿಯಲ್ಲಿ ಲಭ್ಯವಿರುವ ಮಾಹಿತಿ ಹಾಗೂ ವಾಸವಿರುವ ಕುಟುಂಬಸ್ಥರ ಬಳಿ ಇರುವ ಮಾಹಿತಿಯನ್ನು ಪರಿಶೀಲಿಸಿ ಪೌತಿ ಖಾತೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಿತಿ ರಚಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಪಂಗಡದವರು ಪೊಲೀಸ್ ಇಲಾಖೆಯಲ್ಲಿ ದಾಖಲೆ ಮಾಡುವ ಪ್ರಕರಣಗಳಲ್ಲಿ ಸರಿಯಾಗಿ ಚಾಜ್೯ ಶೀಟ್ ಆಗುತ್ತಿಲ್ಲ ಎಂದು ಕೆಲವು ಮುಖಂಡರು ಸಭೆಯಲ್ಲಿ ಚರ್ಚಿಸಿದಾಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಈ ಕುರಿತು ತಾವೇ ಖುದ್ದು ಪರಿಶೀಲಿಸಿ ವರದಿ ನೀಡುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಸಮುದಾಯದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

Tags:
error: Content is protected !!