Mysore
28
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ: ಸಂವಾದದಲ್ಲಿ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯಂ ಅಭಿಮತ

ಮಂಡ್ಯ: ಕನ್ನಡ ಉತ್ಸವ ನಮಗೆ ಬೇಕಿದೆ. ಇವತ್ತಿನ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ರೀತಿಯ ಸ್ವರೂಪ ಬದಲಾಗಬೇಕಾದ ಅನಿವಾರ್ಯತೆಯಿದೆ ಎಂದು ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಮಣ್ಯಂ ಅಭಿಪ್ರಾಯಪಟ್ಟರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ವಾರದ ಸಾಹಿತ್ಯ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮ್ಮೇಳನದ ಸ್ವರೂಪದ ಬಗ್ಗೆ ವಿರೋಧವಿದೆ. ಸಮ್ಮೇಳನದ ವಿರುದ್ಧವಲ್ಲ ಎಂಬುದು ಸಂವೇದನಾ ಶಿಲ ಮನಸ್ಸುಗಳ ಯೋಚನೆಯಾಗಿದ್ದು, ಮಹಾರಾಷ್ಟ್ರದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳು ಬಿಟ್ಟು ಬೇರಾರು ಇರುವುದಿಲ್ಲ, ಆದರೆ ನಮ್ಮಲ್ಲಿ ಸಾಹಿತಿಗಳು ಬಿಟ್ಟು ಬೇರೆಲ್ಲರೂ ವಿಜೃಂಭಿಸುವುದು ಬೇಸರ ತಂದಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳಿಗೆ ಆಧ್ಯತೆ ಇರಬೇಕು. ಸಾಹಿತ್ಯ ಬಿಟ್ಟು ಬೇರೆಯದಕ್ಕೆ ಪೂಕರವಾಗಿ ಸಮ್ಮೇಳನ ಕೆಲಸ ಮಾಡಬೇಕು. ಸಾಹಿತಿಗಳಿಗಿಂತ ಸಾಹಿತ್ಯೇತರ ವ್ಯಕ್ತಿಗಳು ಮುಖ್ಯವಾಗುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದರು.

ಸಾಹಿತ್ಯ ಬಿಟ್ಟು ಉಳಿದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿದೆ. ಸಮ್ಮೇಳನದಲ್ಲಿ ನಡೆಯಬೇಕಾದ ಗೋಷ್ಠಿಗಳು, ವಿಚಾರಗಳ ಬಗ್ಗೆ ಚರ್ಚೆ, ಯಾವ ಲೇಖಕರು ಭಾಗವಹಿಸುತ್ತಿದ್ದಾರೆ ಎಂಬುದು ಚರ್ಚೆಯಾಗುತ್ತಿಲ್ಲ, ಸಾಹಿತ್ಯ ಸಮ್ಮೇಳನದ ಆದ್ಯತೆ ಏನು, ಯಾವ ವಿಷಯದ ಬಗ್ಗೆ ಚರ್ಚೆಯಾಗುತ್ತಿದೆ ಎಂಬುದು ತಿಳಿಯದೇ ಹೋದಲ್ಲಿ ಸಾಹಿತ್ಯ ಸಮ್ಮೇಳನ ಏಕೆಬೇಕು ಎಂದು ಪ್ರಶ್ನಿಸಿದರು.

ಈ ಹಿಂದೆ ಸಾಹಿತ್ಯ ಸಮ್ಮೇಳನ ನಿಲ್ಲಿಸಿ, ಆ ಹಣದಲ್ಲಿ ಗ್ರಂಥಾಲಯ ಮಾಡಿ, ಕನ್ನಡದ ಬಗ್ಗೆ ಅಧ್ಯಯನ ಮಾಡುವವರಿಗೆ ಪೂಕರವಾದ ಎಲ್ಲಾ ಲೇಖಕರ ಪುಸ್ತಕ ದೊರೆಯುವಂತೆ ಮಾಡೋಣ ಎಂದು ಯೋಚಿಸಿದ್ದು, ಅದಕ್ಕೆ ವಿವೇಕರ್ ರೈ ಹೊರತು ಪಡಿಸಿ ಬೇರಾರು ಬೆಂಬಲ ನೀಡಲಿಲ್ಲ. ಇದರಿಂದ ಸಾಹಿತ್ಯ ಪರಿಷತ್ತಿನ ಕೆಲಸದ ಕ್ರಮ ತಿಳಿಯುತ್ತದೆ ಎಂದು ದೂಡಿದರು.

ಸಾಹಿತ್ಯದ ಅಧ್ಯಯನಕ್ಕೆ ಕರ್ನಾಟಕದಲ್ಲಿ ಕನ್ನಡದ ಪ್ರಮುಖ ಲೇಖಕರ ಗ್ರಂಥಾಲಯವಿಲ್ಲ. ಮಂಡ್ಯ ಜಿಲ್ಲೆಯ ಎಲ್ಲ ಸಾಹಿತಿಗಳ ಪುಸ್ತಕಗಳು ದೊರೆಯುವಂತಹ ಸ್ಥಳ ಇಲ್ಲ, ಸಮ್ಮೇಳನಕ್ಕೆ ಖರ್ಚು ಮಾಡುವ ೨೫ ಕೋಟಿ ರೂ.ನಲ್ಲಿ ಕನಿಷ್ಠ ೨.೫೦ ಕೋಟಿ ರೂ ಖರ್ಚು ಮಾಡಿದರೆ ಮಂಡ್ಯದಲ್ಲಿ ಕನ್ನಡ ಕವಿಗಳ ಗ್ರಂಥಾಲಯ ನಿರ್ಮಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಸಾಹಿತಗಳ ಮಾತುಗಳು ಗೊಣಗಾಟವಾಗಿದೆ. ಸಾಹಿತ್ಯ ಮನಸ್ಥಿತಿ ಅದೀನ ಸ್ಥಿತಿಯನ್ನು ತಲುಪಿದೆ. ಹೇಳುವ ಶಕ್ತಿಯನ್ನು, ಸ್ವಾಯತ್ತತೆಯನ್ನು, ದಿಟ್ಟತನವನ್ನು ಕಳೆದುಕೊಂಡಿದ್ದೇವೇಯೇ ಎಂಬುದರ ಬಗ್ಗೆ ಯೋಚಿಸಿ, ಆತ್ಮ ವಿಮರ್ಷೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ರಾಜ್ಯದ ಬೇರೆ ಜಿಲ್ಲೆಗಳಿಗಿಂತಲೂ ಮಂಡ್ಯ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದ್ದು, ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ಯಕ್ಷಗಾನದ ಮೂಲ ಮಂಡ್ಯ ಜಿಲ್ಲೆಯಲ್ಲಿದೆ. ಮೊದಲ ಒಕ್ಕಲಿಗ ಕವಿ ಕೆಂಪಣ್ಣಗೌಡ, ಮಂಡ್ಯದ ಕೃಷಿ ಸಂಸ್ಕೃತಿಗೆ ಪ್ರಾಶಸ್ತ್ಯವಿದೆ. ಈ ಸಮ್ಮೇಳನದಲ್ಲಿ ಮಂಡ್ಯ ಸಂಸ್ಕೃತಿಯನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸದಿದ್ದರೆ. ಜಿಲ್ಲೆಗೆ ಅನ್ಯಾಯವಾದಂತೆ ಎಂದು ಅಭಿಪ್ರಾಯಿಸಿದರು.

ಯಾವ ಜಿಲ್ಲೆಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತದೆಯೋ. ಅದೇ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಒಟ್ಟು ಸಾಹಿತ್ಯದ ರಾಜ್ಯ ಮಟ್ಟದ ಚರ್ಚೆ ಮಾಡಬೇಕು. ನಾಡಿನ ವಿವಿಧ ಕಡೆಯಿಂದ ಎಲ್ಲ ವಿದ್ವಾಂಸರು ಬರಲಿದ್ದು, ಜಿಲ್ಲೆಯ ಸಂಸ್ಕೃತಿಕ ಸಂಪತ್ತು ತಿಳಿಸಬೇಕಾದ ಜವಾಬ್ದಾರಿ ಸಾಹಿತ್ಯ ಪರಿಷತ್ತಿನ ಮೇಲಿದೆ ಎಂದು ತಿಳಿಸಿದರು.

ಸಾಹಿತ್ಯ ಸಮ್ಮೇಳನದಲ್ಲಿ ಮೊದಲು ಎಲ್ಲ ಲೇಖಕರನ್ನು ಕಾಣುತ್ತಿದ್ದೆವು. ಆದರೆ ವಿದೇಶದಿಂದ ಕನ್ನಡಿಗರನ್ನು ಕರೆತರುತ್ತೇನೆ ಎನ್ನುವ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಕನ್ನಡ ನಾಡಿನಲ್ಲಿರುವ ಎಲ್ಲ ಸಾಹಿತಿಗಳನ್ನು ಆಹ್ವಾನಿಸಿ. ಅವರು ವೇದಿಕೆಯ ಮೇಲೆಯೇ ಇರುವಂತಹ ಅವಶ್ಯಕೆಯಿಲ್ಲ, ವಿಶೇಷ ಆಹ್ವಾನಿತ ಸ್ಥಾನ ನೀಡಿ, ಸಮ್ಮೇನದಲ್ಲಿ ಪಾಲ್ಗೊಳ್ಳುವಂತ ಮಾಡಿ ಎಂದು ಸಲಹೆ ನೀಡಿದರು.

ದೇವನೂರು ಮಹದೇವ, ಎಸ್.ಎಲ್.ಬೈರಪ್ಪ ರಂತಹ ಅನೇಕ ಸಾಹಿತಿಗಳು ಸಮ್ಮೇಳನಕ್ಕೆ ಬಂದರೆ, ಸಮ್ಮೇಳನದ ಘನತೆ ಹೆಚ್ಚಾಗುತ್ತದೆ. ಸಮ್ಮೇಳನ ಆಯೋಜಕರು ದೇವನೂರು ಮಹದೇವು, ಬೈರಪ್ಪ, ಚಂದ್ರ ಶೇಖರ್ ಕಂಬಾರರನ್ನು ಏಕೆ ಆಹ್ವಾನಿಸಬಾರದು. ಸಮ್ಮೇಳನಕ್ಕೆ ಬರದೇ ಇದ್ದರೂ ಯಾವರೀತಿಯ ಸಮ್ಮೇಳನವನ್ನು ರೂಪಿಸಬೇಕು ಎಂಬ ಸಲಹೆಯನ್ನಾದರೂ ಪಡೆಯದಿರುವುದು ಆಶ್ಚರ್ಯ ತಂದಿದೆ ಎಂದರು.

ಸಮ್ಮೇಳನದಲ್ಲಿ ಯಾವ ಚರ್ಚೆಯಾಗಬೇಕೆಂಬುದನ್ನು ಬೇರೆಯವರೇ ಮಾಡಬೇಕೆಂದರೆ ಸಾಹಿತ್ಯ ಸಮ್ಮೇಳನವನ್ನು ಏಕೆ ಮಾಡಬೇಕು. ಅದರ ಬದಲು ಕನ್ನಡೋತ್ಸವನ್ನು ಮಾಡಿ, ಏನು ಬೇಕಾದರೂ ಮಾಡಿಕೊಳ್ಳಿ ಎಂದ ಅವರು, ಸಾಹಿತ್ಯ ಸಮ್ಮೇಳನ ಮಾಡುವಾಗ ಗೋಷ್ಠಿಗಳ ವಿಚಾರ ನಿರ್ಧರಿಸಿ, ಲೇಖಕರನ್ನು ಆಹ್ವಾನಿಸಬೇಕು. ಯಾರನ್ನೋ ವಿಜೃಂಭಿಸುವಂತೆ ಸಾಹಿತ್ಯ ಸಮ್ಮೇಳನ ಮಾಡಿದರೆ. ಅದು ಸಾಹಿತ್ಯ ಅತ್ಯಾಚಾರ ಮಾಡಿದಂತೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ಎಲ್ಲಾ ಭಾಗಗಳು ಬೇರೆ ಭಾಷೆಗಳ ಪ್ರಭಾವಕ್ಕೊಳಗಾಗಿದೆ. ಮಂಡ್ಯ ಯಾವ ಪ್ರಭಾವಕ್ಕೂ ಒಳಗಾಗದೇ ಕನ್ನಡದ ಶಕ್ತಿಯನ್ನು ಅಸ್ಮಿತೆಯನ್ನು ಕಾಪಾಡಿಕೊಂಡಿದೆ. ಇವೆಲ್ಲವುದರ ಅಧ್ಯಯನ ಮಾಡಿ, ಜಿಲ್ಲೆಯ ಸಂಸ್ಕೃತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಬೇಕಿದೆ ಎಂದು ತಿಳಿ ಹೇಳಿದರು.

ಎಲ್ಲಿ ವ್ಯಕ್ತಪ್ರತಿಷ್ಠ ಮುಖ್ಯವಾಗುತ್ತದೆಯೋ ಅಲ್ಲಿ ವಿಷಯಗಳು ಮರೆಯಾಗುತ್ತವೆ. ಯಾವುದೇ ಕ್ಷೇತ್ರದಲ್ಲಿಯಾದರೂ ವ್ಯಕ್ತಿ ಪ್ರತಿಷ್ಠಯಿಂದ ಅದರ ದಿಕ್ಕು ಬದಲಾಗುತ್ತದೆ ಎಂದು ಸಾಹಿತ್ಯ ಪರಿಷತ್ತನ ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ವಿಚಾರವಾಗಿ ಉತ್ತರಿಸಿದರು.

ಎಲ್ಲ ಕಾಲಕ್ಕೂ ರಾಜಕೀಯ ಮತ್ತು ಧರ್ಮ ಎಂಬುದು ಪ್ರಬಲ ಶಕ್ತಿಗಳಾಗಿವೆ. ಇವರು ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತವೆ. ಅದೇ ರೀತಿ ಸಾಹಿತ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ಸ್ವಾಯತ್ತ ಪ್ರಶ್ನೆಯನ್ನು ಸ್ವತಂತ್ರ್ಯವಾಗಿ ಯೋಚನೆ ಮಾಡಬೇಕು. ರಾಜಕೀಯ ಧರ್ಮದ ಶಕ್ತಿಗಳು ತನಗೆ ಅನಿಸಿದ್ದನ್ನ ಹೇಳುವ ಶಕ್ತಿಯನ್ನು ಸಾಹಿತಿಗಳು ಪಡೆಯಬೇಕು. ಸಮಾಜದ ಶಕ್ತಿಯಾಗಿ ಪ್ರತಿನಿಧಿಸಬೇಕು ಎಂದು ಸಮ್ಮೇಳನಾಧ್ಯಕ್ಷರಾಗಿ ರಾಜಕೀಯ, ಮಠಾಧೀಶರ ಆಯ್ಕೆ ಸಂಬಂಧ ಉತ್ತರ ನೀಡಿದರು.

ಸಮ್ಮೇಳನದ ವಿಚಾರಗೋಷ್ಠಿಗಳು ಆಕರ್ಷಣೆಯನ್ನು ಕಳೆದುಕೊಳ್ಳಲು ಆಕರ್ಷಕವಾಗಿ ಮಾತನಾಡುವ ಸಾಹಿತಿಗಳ ಕೊರತೆ ಕಾರಣ, ನಿರಾಸಕ್ತಯುತವಾಗಿ ಮಾತನಾಡಿದರೆ ಯಾರು ಇರುತ್ತಾರೆ. ವಾಗ್ಮಿತೆ ಎಂಬುದು ಒಂದು ಕಲೆ. ಚನ್ನಾಗಿ ಮಾತನಾಡಿದರೆ ಜನ ಕೇಳುತ್ತಾರೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಇತ್ತೀಚೆಗೆ ಸಾಹಿತಿಗಳಲ್ಲದವರೂ ಸಾಹಿತ್ಯ ಪರಿಷತ್ತಿನ ನೇತೃತ್ವವ ವಹಿಸುತ್ತಿದ್ದಾರೆ. ಸಾಹಿತ್ಯ ಪರಿಷತ್ತಿನ ನೇತೃತ್ವ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಲಭಿಸುತ್ತಿತ್ತು. ಸಾಹಿತ್ಯ ಪರಿಷತ್ತು ಅಧಿಕಾರ ಕೇಂದ್ರವಾಗುತ್ತಿದ್ದು, ಸಾಹಿತ್ಯೇತರರು ಅದಕ್ಕಾಗಿ ಪರಿಷತ್ತಿ ಪ್ರವೇಶ ಮಾಡುತ್ತಿದ್ದಾರೆ ಇದರಿಂದ ಪಾರಾಗಬೇಕಿದೆ ಎಂದು ಆತಂಕದ ನುಡಿಗಳನ್ನಾಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ್, ಉಪಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಕಾರ್ಯದರ್ಶಿ ಜಯರಾಮ್ ಇದ್ದರು.

Tags: