Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ವಿಷಾಹಾರ : ಚಿಕಿತ್ಸೆ ಬಳಿಕ ಪರೀಕ್ಷೆಗೆ ಅವಕಾಶ ; ಜಿಲ್ಲಾಧಿಕಾರಿ ಕುಮಾರ

ಮಂಡ್ಯ : ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗೋಕುಲ ವಿದ್ಯಾಸಂಸ್ಥೆಯಲ್ಲಿ ವಿಷಹಾರ ಸೇವನೆಯಿಂದ ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ರಾಜ್ಯದ 22 ವಿದ್ಯಾರ್ಥಿಗಳು ಹಾಗೂ ಸ್ಥಳೀಯ 14 ವಿದ್ಯಾರ್ಥಿಗಳು ಗುಣಮುಖರಾದ ನಂತರ ಶೈಕ್ಷಣಿಕ ವರ್ಷದ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ: ಕುಮಾರ  ಹೇಳಿದರು.

ಬುಧವಾರ  ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮೇಘಾಲಯ‌ ರಾಜ್ಯದ 22 ವಿದ್ಯಾರ್ಥಿಗಳು 1 ರಿಂದ 9 ನೇ ತರಗತಿಯೊಳಗಿದ್ದು, ಗುಣಮುಖರಾದ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಲಾಗುವುದು.‌ ಬಾಲಮಂದಿರದಲ್ಲಿ ಅವರಿಗೆ ವಾಸ್ತವ್ಯ ಹಾಗೂ ವೈದ್ಯರ ಸಲಹೆಯಂತೆ ಆಹಾರ ಒದಗಿಸಲಾಗುವುದು ಎಂದರು.

ಶಿಕ್ಷಣ ಇಲಾಖೆಯು ಮೇಘಾಲಯ ರಾಜ್ಯದ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಬೇಕು. ಇದಲ್ಲದೇ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವೈದ್ಯರ ಸಲಹೆ ಹಾಗೂ ಪೋಷಕರ ಒಪ್ಪಿಗೆ ಪಡೆದು ಪರೀಕ್ಷೆ -1 ಬರೆಯಲಿ ಇಲ್ಲವಾದಲ್ಲಿ ಪರೀಕ್ಷೆ-2 ಬರೆಯಲು ವ್ಯವಸ್ಥೆ ಮಾಡಿ ಎಂದರು.

ಚಿಕಿತ್ಸೆ ಪಡೆಯುತ್ತಿರುವ ಮೇಘಾಲಯ ವಿದ್ಯಾರ್ಥಿಗಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರ ಮಾಡಿದ ನಂತರ ಮೇಘಾಲಯ ಸರ್ಕಾರ ನಿಯೋಜಿಸಿರುವ ಅಧಿಕಾರಿಗಳು ಮಕ್ಕಳ ಪೋಷಕರನ್ನು ಅವರ ಆಧಾರ್ ಕಾಡ್೯ ಗುರುತಿನ ಚೀಟಿಯೊಂದಿಗೆ ಆಗಮಿಸಿ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ರ ನೀಡಿ ನಂತರ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಇದಲ್ಲದೇ ಮೇಘಾಲಯ ರಾಜ್ಯದ ವಿದ್ಯಾರ್ಥಿಗಳನ್ನು ಗೋಕುಲ ಶಾಲೆಗೆ ದಾಖಲೆ ಮಾಡುವ ಸಂದರ್ಭದಲ್ಲಿ ನೀಡಿರುವ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುವಂತೆ ತಿಳಿಸಿದರು.

ಪೋಷಕರ ಸಭೆ ಹಾಗೂ ಪರೀಕ್ಷೆ ನಡೆಸಿ ಶೈಕ್ಷಣಿಕ ಸಾಲು ಅಂತ್ಯವಾಗುತ್ತಿದ್ದು, ಗೋಕಲ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸ್ಥಳೀಯ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆತಂದು ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿ, ಅಗತ್ಯವಿದ್ದಲ್ಲಿ ಶಿಕ್ಷಣ ಇಲಾಖೆಯಿಂದಲೂ ಸಿಬ್ಬಂದಿ ನಿಯೋಜಿಸಿ. ಇನ್ನೊಂದು ಭಾಗದಲ್ಲಿ ಶಾಲೆಗೆ ನೋಟೀಸ್ ನೀಡುವ ಕೆಲಸ ನಡೆಯುತಿರಲಿ ಎಂದರು.

ಜಿಲ್ಲೆಯ ವಸತಿ ಶಾಲೆಗಳ ಪರಿಶೀಲನೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಭೂತ ವ್ಯವಸ್ಥೆಗಳು, ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಕುರಿತು ವರದಿ ನೀಡಲು ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗುವುದು ಎಂದರು.

ಸರ್ಕಾರದ ಆಧೀನದಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ‌ ಹೊರಗಿನ ವ್ಯಕ್ತಿ ಹಾಗೂ ಸಂಸ್ಥೆಯಿಂದ ಆಹಾರ ಪಡೆಯುವಂತಿಲ್ಲ. ಯಾವುದಾದರೂ ದೂರು ಬಂದಲ್ಲಿ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ನೋಡಲ್ ಅಧಿಕಾರಿಗಳ ನೇಮಕ ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ‌ ಮಾಡಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಿಸಿ ಊಟದ ಸಂದರ್ಭದಲ್ಲಿ ಬೇರೆ ದಾನಿಗಳು ಆಹಾರ ನೀಡುವುದಾಗಿ ತಿಳಿಸುವುದು ಶಾಲೆ ಅವರನ್ನು ಪ್ರೋತ್ಸಾಹಿಸುವುದು ಕಂಡುಬಂದಲ್ಲಿ ಶಿಸ್ತು ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.

ಗೋಕುಲ ವಿದ್ಯಾಸಂಸ್ಥೆಗೆ ಪರವಾನಗಿ ನೀಡುವಾಗ ಅಥವಾ ನವೀಕರಣ ಮಾಡುವ ಸಂದರ್ಭದಲ್ಲಿ ಪರಿಶೀಲನೆ ಮಾಡಿದ ಅಧಿಕಾರಿಯ ವಿವರವನ್ನು ಒದಗಿಸುವಂತೆ ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರವಾನಗಿ ನವೀಕರಣ ಅಥವಾ ಪರವಾನಗಿ ನೀಡುವ ಸಂದರ್ಭದಲ್ಲಿ‌ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲನೆ ಕಟ್ಟುನಿಟ್ಟಾಗಿ ‌ನಡೆಸಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಮಾತನಾಡಿ, ಮಕ್ಕಳ ಆರೋಗ್ಯದ ಮೇಲೆ ಈಗಾಗಲೇ ನಿಗಾ ವಹಿಸಲು ಸಿಬ್ಬಂದಿಗಳನ್ನು ಮಿಮ್ಸ್ ಗೆ ನಿಯೋಜಿಸಲಾಗಿದೆ. ಬಾಲಕರ ಬಾಲಮಂದಿರದಲ್ಲಿ ಸ್ಥಳಾವಕಾಶ ಕಡಿಮೆಯಾಗುವುದರಿಂದ ಬಾಲಮಂದಿರದ ಪಕ್ಕದ ಕಟ್ಟಡದಲ್ಲಿ ಮಕ್ಕಳಿಗೆ ಬೇಕಿರುವ ವ್ಯವಸ್ಥೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೇಘಾಲಯ ರಾಜ್ಯದ ಶಿಕ್ಷಣ ಇಲಾಖೆಯ ಪೀಟರ್ ಸುನ್, ರುಡಿ ಕ್ರಿಯಲ್, ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಸುಮಿತ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!