ಮಂಡ್ಯ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿವೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ತಾಲ್ಲೂಕಿನ ದುದ್ದ ಗ್ರಾಮದಲ್ಲಿ ಏರ್ಪಡಿಸಿದ್ದ ದುದ್ದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗಳ ಕುರಿತ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರದ ಐದು ಗ್ಯಾರಂಟಿಗಳು ಪ್ರತಿ ಕುಟುಂಬಕ್ಕೆ ತಲುಪುವ ಮೂಲಕ ಆರ್ಥಿಕ ಶಕ್ತಿ ನೀಡಿವೆ ಎಂದರು.
ಹಳ್ಳಿಗಳಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿ ಸಾಮಾನ್ಯ ವ್ಯಕ್ತಿಗಳ ಶೋಷಣೆ ನಡೆಯುತ್ತಿದೆ. ಮಹಿಳೆಯರು ತಮ್ಮ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ನಿಗ್ರಹಿಸಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಎಚ್.ಎಂ.ಉದಯ್‌ಕುಮಾರ್ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಕೈ ಜೋಡಿಸಬೇಕು. ಗ್ರಾ.ಪಂ. ಮಟ್ಟದಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಗೆ ಯೋಜನೆಗಳು ಸಿಗುವಂತೆ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಅಧಿಕಾರಿಗಳ ಸಹಕಾರದಿಂದ ದುದ್ದ ಹೋಬಳಿಯ 11 ಗ್ರಾಮ ಪಂಚಾಯಿತಿಗಳಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತು ಸಭೆ ನಡೆಸಿ,ಇದೀಗ ಗ್ಯಾರಂಟಿ ಯೋಜನೆಗಳ ಸಮಾವೇಶ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಇದೇ ವೇಳೆ ಸಭೆಗೆ ಆಗಮಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಕೆ.ಎಸ್.ಪುಟ್ಟಣ್ಣಯ್ಯ ಫೌಂಡೇಷನ್ ವತಿಯಿಂದ ಮಹಿಳೆಯರಿಗೆ ದೊರೆಯುವ ಸಾಲ ಸೌಲಭ್ಯದ ಬಗ್ಗೆ ಸ್ಮಿತಾಪುಟ್ಟಣ್ಣಯ್ಯ ತಿಳಿಸಿದರು.
ಸಮಾವೇಶದಲ್ಲಿ ಶಿಶು ಅಭಿವೃದ್ಧಿ ಯೋಜನಾಽಕಾರಿ ಕುಮಾರಸ್ವಾಮಿ, ಟಿಪಿಒ ವೆಂಕಟರಾಮ್, ಚಂಪಕಮಾಲಿನಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





