Mysore
26
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡಿ : ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸಲಹೆ

Encourage horticultural crops: G.P. CEO advises officials

ಮಂಡ್ಯ : ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹ ನೀಡುವುದು ಗ್ರಾಮೀಣ ಆರ್ಥಿಕತೆಗೆ, ಪರಿಸರ ಸಮತೋಲನಕ್ಕೆ ಹಾಗೂ ಆಹಾರ ಭದ್ರತೆಗೆ ಬಹು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸುವಂತೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಸೂಚಿಸಿದರು.

ಬುಧವಾರ ಮಂಡ್ಯ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳಲ್ಲಿನ ತೋಟಗಾರಿಕಾ ಇಲಾಖೆಯ ಫಲಾನುಭವಿಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಣಬೆ, ಕರಿಬೇವು, ಪಪ್ಪಾಯ, ಬಾಳೆ ಬೆಳೆ ಬೆಳೆದಿರುವ ರೈತರೊಂದಿಗೆ ಚರ್ಚಿಸಿ ಯೋಜನೆಯಿಂದಾಗಿರುವ ಪ್ರಯೋಜನದ ಬಗ್ಗೆ ಮಾಹಿತಿ ಪಡೆದರು.

ತೋಟಗಾರಿಕೆ ಇಲಾಖೆಯಿಂದ ಬಿತ್ತನೆ, ಮಲ್ಚಿಂಗ್, ಹನಿ ನೀರಾವರಿ, ಗ್ರೀನ್ ಹೌಸ್ ಗಳಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುತ್ತದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿರುವ ರೈತರ ಯಶೋಗಾಥೆಗಳನ್ನು ಸಿದ್ದಪಡಿಸಿ ಜಿಲ್ಲೆಯಾದ್ಯಂತ ಪ್ರಚಾರ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

10X10 ಅಡಿ ಅಳತೆಯಲ್ಲಿ ಅಣಬೆ ಬೇಸಾಯ: ಮನೆಯ ಛಾವಣಿಯ 10X10 ಅಡಿ ಅಳತೆಯಲ್ಲಿ ಅಣಬೆ ಬೇಸಾಯ ಮಾಡುತ್ತಿರುವ ಸುನೀಲ್ ಎಂಬುವವರು ಡಿಪ್ಲೊಮೋ ಪದವಿ ಪಡೆದಿದ್ದು, ಅಣಬೆ ಬೇಸಾಯದಿಂದ ಪ್ರತೀ ಮಾಹೆ ರೂ.25,000/-ದಿಂದ 30,000/-ದವರೆಗೆ ಆದಾಯ ಗಳಿಸುತ್ತಿದ್ದಾರೆ. ರೂ.2.00ಲಕ್ಷಗಳ ಮೂಲ ಬಂಡವಾಳದೊಂದಿಗೆ ಅಣಬೆ ಬೇಸಾಯ ಪ್ರಾರಂಭಿಸಿದ್ದು, ತೋಟಗಾರಿಕಾ ಇಲಾಖೆಯಿಂದ ರೂ.1.00 ಲಕ್ಷಗಳವರೆಗೆ ಸಹಾಯಧನ ದೊರೆಯುತ್ತದೆ ಎಂದು ತಿಳಿಸಿದರು.

ಇದೇ ಮಾದರಿಯಲ್ಲಿ ಸ್ವ-ಸಹಾಯ ಸಂಘಗಳು ಅಣಬೆ ಬೇಸಾಯ ಮಾಡಿಸಲು ತರಬೇತಿ ನೀಡಬೇಕು ಹಾಗೂ ಅವರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿ.ಪಂ. ಸಿಇಓ ಸಲಹೆ ನೀಡಿದರು.

ರೈತರಿಂದ ನೇರ ಕಾರ್ಖಾನೆಗೆ ಸರಬರಾಜಾಗುತ್ತಿರುವ ಕರಿಬೇವು
ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಗ್ರಾಮದ ರೈತ ತಿಮ್ಮೆಗೌಡರ ಜಮೀನಿನಲ್ಲಿ ನರೇಗಾ ಯೋಜನೆಯ ಸಹಾಯದಿಂದ ಬೆಳೆಯಲಾಗಿರುವ ಕರಿಬೇವನ್ನು ನೇರವಾಗಿ ಕಾರ್ಖಾನೆಗೆ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಉತ್ತಮ ಲಾಭ ದೊರೆಯುತ್ತಿದೆ ಎಂದು ರೈತ ಸಂತಸ ವ್ಯಕ್ತಪಡಿಸಿದರು.

ಪ್ರಗತಿಪರ ರೈತ ಲಕ್ಷ್ಮೇಗೌಡರ ಪಪ್ಪಾಯ ತೋಟಕ್ಕೆ ಭೇಟಿ
ಪ್ರಗತಿಪರ ರೈತ ಲಕ್ಷ್ಮೇಗೌಡರು ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರಿನಲ್ಲಿರುವ ತಮ್ಮ 10 ಎಕರೆ ತೋಟದಲ್ಲಿ ನರೇಗಾ ಹಾಗೂ ತೋಟಗಾರಿಕಾ ಇಲಾಖೆಯ ಅನುದಾನ ಪಡೆದು ಪಪ್ಪಾಯ ಹಾಗೂ ಅಂತರ ಬೆಳೆಯಾಗಿ ದಾಳಿಂಬೆ ಬೆಳೆದಿದ್ದು, ಮಂಡ್ಯ ಜಿಲ್ಲೆಯಲ್ಲಿನ ಹಾಪ್ ಕಾಮ್ಸ್ ಗಳಿಗೆ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಪಪ್ಪಾಯ ಸರಬರಾಜು ಮಾಡಿದ ರೈತರಾಗಿದ್ದಾರೆ.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ರೂಪಶ್ರೀ, ತೋಟಗಾರಿಕಾ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜೇಶ್ ಸೇರಿದಂತೆ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Tags:
error: Content is protected !!