ಮಂಡ್ಯ: ಆಸ್ತಿ ತೆರಿಗೆ ಪಾವತಿಸುವುದು ಜವಾಬ್ದಾರಿಯುತ ನಾಗರೀಕತ ಕರ್ತವ್ಯ. ಸಾರ್ವಜನಿಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ಅವರು ಇಂದು (ಫೆ13) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರೆವಿನ್ಯೂ ಬಡಾವಣೆಗಳಲ್ಲಿನ ಆಸ್ತಿಗಳನ್ನು ನೋಂದಾಯಿಸುವ ಹೊಸ ಸುತ್ತೋಲೆ/ಮಾರ್ಗದರ್ಶನೆಗಳಂತೆ ನೋಂದಣಿ ಮಾಡುವ ಬಗ್ಗೆ ಹಾಗೂ ಫೆಬ್ರವರಿ 10 ರ ಅಂತ್ಯಕ್ಕೆ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳ ಮತ್ತು ವಿಷಯಗಳ ಪ್ರಗತಿ ಕುರಿತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಸ್ತಿ ತೆರಿಗೆ ಕಟ್ಟುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದ್ದು, ಸಾರ್ವಜನಿಕರಿಗೆ ಆಸ್ತಿ ತೆರಿಗೆ ಪಾವತಿ ನಿಗದಿತವಾಗಿ ಮಾಡಿದರೆ ಮಾತ್ರ ಅಧಿಕಾರಿಗಳನ್ನು ಪ್ರಶ್ನಿಸಲು ಅರ್ಹರಾಗಿರುತ್ತಾರೆ. ಸ್ಥಳೀಯ ಸಂಸ್ಥೆ ಅಧಿಕಾರಿಗಳು ಆಸ್ತಿ ತೆರಿಗೆ ಪಾವತಿ ಕುರಿತು ಜಾಗೃತಿ, ವಸೂಲಾತಿ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದರು.
ಕರ್ನಾಟಕ ಮುನ್ಸಿಪಾಲಿಟಿ ತೆರಿಗೆ (ತಿದ್ದುಪಡಿ) ನಿಯಮಗಳು-2025
ರಾಜ್ಯ ಸರ್ಕಾರ ತೆರಿಗೆ ವಿಚಾರದ ಕುರಿತು ಇರುವ ಗೊಂದಲಗಳನ್ನು ಸರಿಪಡಿಸಲು ಹೊಸ ಮುನ್ಸಿಪಾಲಿಟಿ ತೆರಿಗೆಗೆ ಹೊಸ ತಿದ್ದುಪಡಿ ನಿಯಮವನ್ನು ಜಾರಿಗೊಳಿಸಿದೆ. ಈ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು, ಅಧಿಕಾರಿಗಳು ಈ ಕಾಯ್ದೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದರು.
ಅಧಿಕೃತ ಆಸ್ತಿ ಸ್ವತ್ತುಗಳು ಹಾಗೂ ಅನಧಿಕೃತ ಆಸ್ತಿ ಸ್ವತ್ತುಗಳು ಸಂಖ್ಯೆ ಎಷ್ಟಿದೆ ಎಂಬುದರ ಬಗ್ಗೆ ಅಧಿಕಾರಿಗಳ ಹತ್ತಿರ ನಿಖರ ಮಾಹಿತಿ ಇರಬೇಕು. ಅನಾಧಿಕೃತ ಆಸ್ತಿ ಸ್ವತ್ತುಗಳಿಗೆ ಬಿ ಖಾತಾ ಮಾಡಿ ಆಸ್ತಿ ತೆರಿಗೆ ವಸೂಲಾತಿ ಮಾಡಬೇಕು. ಆಸ್ತಿ ತೆರಿಗೆ ಪಾವತಿ ಮಾಡದೇ ಇರುವವರಿಗೆ ನೊಟೀಸ್ ಜಾರಿ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ ಎಂಬ ವಿಷಯವನ್ನು ಆಸ್ತಿ ಮಾಲೀಕರಿಗೆ ಮನದಟ್ಟು ಮಾಡಿಕೊಡಬೇಕು ಎಂದರು.
ಕರ್ನಾಟಕ ಮುನ್ಸಿಪಾಲಿಟಿ ತೆರಿಗೆ (ತಿದ್ದುಪಡಿ) ನಿಯಮಗಳ ಪ್ರಕಾರ ಆಸ್ತಿ ತೆರಿಗೆ ವಸೂಲಾತಿ ಮಾಡಲು ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ವಿರುದ್ಧ 25000 ರೂ ದಂಡ ವಿಧಿಸಲು ಅವಕಾಶವಿದೆ. ಅಧಿಕಾರಿಗಳು ಚುರುಕಾಗಿ ಕೆಲಸ ನಿರ್ವಹಿಸಿ ಎಂದರು.
ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ
ಜಿಲ್ಲೆಯ ನಗರಗಳಲ್ಲಿ ಬಳಕೆಗೊಳ್ಳುತ್ತಿರುವ ನೀರಿನ ಗುಣಮಟ್ಟದ ಬಗ್ಗೆ ನಿಗದಿತವಾಗಿ ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದು ಹೇಳಿದರು.
ನಗರಾಭಿವೃದ್ಧಿ ಕೋಶಕ್ಕೆ ಒಳಪಡುವ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಪ್ತಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದರು.
ಜಿಲ್ಲೆಯಲ್ಲಿ ನಗರ ನಿವೇಶನ ಯೋಜನೆಯಡಿ 70 ಕ್ಕೂ ಹೆಚ್ಚು ಎಕರೆ ಭೂಮಿ ಲಭ್ಯವಿರುವ ಜಾಗಗಳನ್ನು ಶೀಘ್ರವಾಗಿ ಫಲಾನುಭವಿಗಳು ತಲುಪಿಸುವ ಕಾರ್ಯ ನಿರ್ವಾಹಿಸಿ, ನಿವೇಶನ ರಹಿತ ಹಾಗೂ ವಸತಿ ರಹಿತರು ಜಿಲ್ಲೆಯಲ್ಲಿ ಎಷ್ಟು ಜನ ಇದ್ದಾರೆ ಎಂಬುದರ ನಿಖರ ಮಾಹಿತಿಯನ್ನು ಇಟ್ಟುಕೊಂಡು, ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೇಷನ್ ಪೋರ್ಟಲ್ ಗೆ ಆಪ್ ಲೋಡ್ ಮಾಡಿ ಎಂದು ಸೂಚಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಮಾಯಣ್ಣ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಜಲಮಂಡಳಿ ಇ.ಇ. ಮೇಘ ಮತ್ತು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





