ಮಂಡ್ಯ: ಬರಗಾಲ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿ ಕಬ್ಬಿನ ಕೊರತೆ ಉಂಟಾಗಲಿದ್ದು, ಲಾಭ-ನಷ್ಟ ನೋಡಿ ಕಾರ್ಖಾನೆ ನಡೆಸುತ್ತಿಲ್ಲ. ರೈತರಿಗೆ ಅನುಕೂಲವಾದರೆ ಸಾಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಭಾನುವಾರ ನಗರದ ಮೈಶುಗರ್ ಕಾರ್ಖಾನೆಯ ಬಾಯ್ಲರ್‌ಗೆ ಪೂಜೆ ಅಗ್ನಿ ಸ್ಪರ್ಶ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಣಾಂತರದಿಂದ ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆಯು ಸರ್ಕಾರದ ನೆರವಿನಿಂದ ಪುನಾರಂಭವಾಗಿದ್ದು, ಈ ಬಾರಿ ಕಬ್ಬು ಹರೆಯಲು ಯಾವುದೇ ಅಡೆತಡೆಯಿಲ್ಲದೆ ಸಜ್ಜಾಗಿದೆ ಎಂದರು.
ಜಿಲ್ಲೆಯ ರೈತರು ಕಳೆದ ಬಾರಿ ಬರಗಾಲ ಎದುರಿಸಿದ್ದಾರೆ, ಹೀಗಾಗಿ ಈ ಬಾರಿ ಕಬ್ಬಿನ ಕೊರತೆ ಇರುತ್ತದೆ. ಆದರು ಸಹ ಸುಮಾರು 2,50,000 ಮೆ.ಟನ್ ಕಬ್ಬು ನುರಿಸುವ ಉತ್ತಮ ಗುರಿಯನ್ನು ಹೊಂದಲಾಗಿದ್ದು, ಪ್ರಸ್ತುತ 1,90,000 ಮರು ಕಬ್ಬು ಒಪ್ಪಿಗೆಯಾಗಿದ್ದು, ಉಳಿದ ಕಬ್ಬನ್ನು ಹೊರಜಿಲ್ಲೆಯ ಮೂಲಕ ನುರಿಸಲಾಗುವುದು ಎಂದರು.
ಕಾರ್ಖಾನೆಯ ಲಾಭ, ನಷ್ಠದ ಆಧಾರದ ಮೇಲೆ ಸದ್ಯಕ್ಕೆ ಕಾರ್ಯನಿರ್ವಹಿಸುವುದು ಕಷ್ಟಕರ. ರೈತರ ಹಿತದೃಷ್ಟಿಯಿಂದ ಸಕ್ಕರೆ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಲಾಭಾದಯಕವಾಗಿ ನಡೆಯಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.