Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿದ ಜಿ.ಪಂ. ಸಿಇಓ

CEO inspects essential basic facilities in schools

ಮಂಡ್ಯ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಂದಿನಿ ಕೆ.ಆರ್. ಅವರು ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಫ್ರೌಡಶಾಲೆಗಳಿಗೆ ಭೇಟಿ ನೀಡಿ ಬಿಸಿ ಊಟ ಯೋಜನೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಶುಕ್ರವಾರ ಚಂದಗಾಲು ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅವರು ಎರಡೂ ಶಾಲೆಗಳಲ್ಲಿನ ಶೌಚಾಲಯ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಶೌಚಾಲಯ ನಿರ್ಮಾಣ ಮಾಡಲು ಅನುಮೋದನೆಯಾಗಿದ್ದರೂ ಸಹ ಕಾಮಗಾರಿ ಪ್ರಾರಂಭಿಸಿಲ್ಲದಿದ್ದರಿಂದ, ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ದೂರವಾಣಿ ಕರೆ ಮಾಡಿ ತ್ವರಿತವಾಗಿ ಶೌಚಾಲಯ ನಿರ್ಮಾಣ ಕಾಮಗಾರಿ ಮಾಡುವಂತೆ ಸೂಚಿಸಿದರು.

ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳಿ, ಗೈರು ಹಾಜರಾದ ಮಕ್ಕಳ ಪೋಷಕರಿಗೆ ಕರೆದು ಮಾತನಾಡಿ ಆ ಮೂಲಕ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಳೆದ ಸಾಲಿಗಿಂತ ಉತ್ತಮ ಪ್ರಗತಿ ಸಾಧಿಸಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಬಿಸಿ ಊಟ ಯೋಜನೆಯಡಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಮಕ್ಕಳ ಅಭಿಪ್ರಾಯ ಪಡೆದರು. ಮೊಟ್ಟೆ ವಿತರಣೆ ಹಾಗೂ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು. ಉತ್ತಮ ಗುಣಮಟ್ಟ ಮೊಟ್ಟೆಗಳನ್ನು ವಿತರಿಸುವಂತೆ ಶಾಲೆಯ ಮುಖ್ಯೋಪದ್ಯಾಯರಿಗೆ ಸೂಚಿಸಿದರು.

ದಾನಿಗಳ ನೆರವಿನಿಂದ ಶಾಲೆಯ ಅಭಿವೃದ್ಧಿ: ಚಂದಗಾಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಯನ್ನು ಸಹ ಪ್ರಾರಂಭಿಸಲಾಗಿದೆ ಎಂದರು.

ಬಸ್ ಸಂಚಾರದ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ: ಚಂದಗಾಲು ಗ್ರಾಮದ ಶಾಲೆಗಳಿಗೆ ಅಕ್ಕ ಪಕ್ಕದ ಗ್ರಾಮಗಳಾದ ಪುಟ್ಟಿಕೊಪ್ಪಲು, ಬಿಳಿಗುಲಿ, ಉಪ್ಪಾರಕೊಪ್ಪಲು ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು, ಶಾಲೆ ಆರಂಭವಾಗುವ ಮತ್ತು ಮುಕ್ತಾಯ ಸಮಯಕ್ಕಿಂತ ವಿಳಂಬವಾಗಿ ಬರುತ್ತಿದೆ. ಇದರಿಂದ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಆಗುತ್ತಿಲ್ಲ ಹಾಗೂ ಶಾಲೆ ಬಿಟ್ಟ ನಂತರ ಒಂದು ಗಂಟೆ ಕಾಯುವ ಸ್ಥಿತಿ ಎದುರಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ ಸಮಸ್ಯೆ ಸರಿಪಡಿಸಲು ತಿಳಿಸಿದರು.

1098 ಸಹಾಯವಾಣಿ ಬಗ್ಗೆ ಅರಿವು ಮೂಡಿಸಲು ಸಲಹೆ
ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ರಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಬಾಲ್ಯ ವಿವಾಹ ತಡೆಗಟ್ಟುವ ಸಲುವಾಗಿ ತೆರೆಯಲಾಗಿರುವ 1098 ಸಹಾಯವಾಣಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಂತೆ ಹಾಗೂ ಮಕ್ಕಳಿಗೆ ಆತ್ಮ ವಿಶ್ವಾಸ ಹೆಚ್ಚಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಶಾಲೆಯ ಮುಖ್ಯೋಪದ್ಯಾಯರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಚಂದಗಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿದ್ಯಾ, ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗೇಶ್, ಶಾಲೆಯ ಮುಖ್ಯೋಪದ್ಯಾಯರಾದ ಜಯಶೀಲಾ ಸೇರಿದಂತೆ ಇತರರು ಹಾಜರಿದ್ದರು.

Tags:
error: Content is protected !!