Mysore
25
overcast clouds

Social Media

ಶುಕ್ರವಾರ, 09 ಜನವರಿ 2026
Light
Dark

ಪೌತಿ ಖಾತಾ ಅರ್ಜಿ ಶೀಘ್ರ ವಿಲೇವಾರಿ ಮಾಡಿ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ ಅರ್ಜಿಯೂ ಬಾಕಿ ಉಳಿದಿರಬಾರದು ಎಂದು ಅಧಿಕಾರಿಗಳಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರು, ರೈತರ ಹೆಸರಿಗೆ ಖಾತೆ ಮಾಡಿಕೊಡಲು ಅಧಿಕಾರಿಗಳು ೫೦೦ ರಿಂದ ಒಂದು ಸಾವಿರ ರೂ. ವರೆಗೆ ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಸಾಕ್ಷಿ ಇದ್ದರೆ ಕೊಡಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದಾಗ ೫೦೦, ಸಾವಿರ ರೂಪಾಯಿಗೆಲ್ಲ ಸಾಕ್ಷಿ ಕೊಡಲು ಸಾಧ್ಯವಿಲ್ಲ ಎಂದು ಕೆ. ವಿವೇಕಾನಂದ ಹೇಳಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ಈ ಸಂಬಂಧ ತಹಸಿಲ್ದಾರ್ ನೇತೃತ್ವದಲ್ಲಿ ತನಿಖೆ ನಡೆಸಿ, ವರದಿ ತರಿಸಿಕೊಳ್ಳಿ, ಯಾರು ತಪ್ಪಿತಸ್ಥರೆಂದು ತಿಳಿಯುತ್ತದೋ ಅಂತಹವರನ್ನು ಅಮಾನತ್ತು ಮಾಡಿ ಎಂದು ತಿಳಿಸಿದರು.

ಆರು ತಿಂಗಳ ಗಡುವು
ಹಿಂದೆ ದರಾಖಾಸ್ತು ಪೋಡಿ ಮಾಡಿಕೊಡಲು ೫ ದಾಖಲೆಗಳ ಆಗತ್ಯ ಇತ್ತು. ಆದರೆ, ನಮ್ಮ ಸರ್ಕಾರ ಅಽಕಾರಕ್ಕೆ ಬಂದ ನಂತರ ೩ ದಾಖಲೆಗಳಿಗೆ ಸೀಮಿತಗೊಳಸಲಾಗಿದ್ದು, ದರಾಖಾಸ್ತು ಪೋಡಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ದಾಖಲೆ ಇಲ್ಲದೆ ಇದ್ದಲ್ಲಿ ಅರ್ಜಿದಾರರ ಊರಿಗೆ ಹೋಗಿ ಪರಿಶೀಲಿಸಿ,ಯಾವುದೇ ಅಡಚಣೆ ಇಲ್ಲದೆ ಇದ್ದಲ್ಲಿ ಅವರಿಗೆ ದರಾಖಾಸ್ತು ಪೋಡಿ ಮಾಡಿಕೊಡಲು ಚಿಂತನೆ ನಡೆಸಲಾಗಿದೆ ಎಂದರು.

ಪೌತಿಖಾತೆ ಆಂದೋಲನದಲ್ಲಿ ಆಫ್‌ಲೈನ್‌ನಲ್ಲಿ ೬೭.೬೫೯ ಖಾತೆಗಳನ್ನು ವಿಲೇವಾರಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ೫೯.೫೨೮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪೌತಿ ಖಾತೆ ಆಂದೋಲನದಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ವಿವರಿಸಿದರು.

ನಿರಾಶ್ರಿತರಿಗೆ ಮನೆ ಒದಗಿಸಿ
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರಿನಲ್ಲಿ ಒಟ್ಟು ೧೫೧ ಮನೆಗಳು ಹಾನಿಗೊಳಗಾಗಿದ್ದು, ಅರ್ಹರಿಗೆ ೬೦.೩೬ ಲಕ್ಷ ರೂ.ಪರಿಹಾರ ನೀಡಲಾಗಿದೆ. ಅಧಿಕಾರಿಗಳು ಮನೆ ಹಾನಿಗೊಳಗಾದವರ ವಿವರಗಳನ್ನು ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್‌ನಲ್ಲಿ ನಮೂದಿಸಿ ಶೀಘ್ರವಾಗಿ ಮನೆ ನಿರಾಶ್ರಿತರಿಗೆ ಪರಿಹಾರ ಒದಗಿಸಿ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಕೆರೆಗಳು ಶೇ. ೮೦ ರಷ್ಟು ತುಂಬಿವೆ. ಮಳೆ ಆಶ್ರಿತ ೪೦೭ ಕೆರೆಗಳು ಶೇ. ೧೦೦ ರಷ್ಟು ಭರ್ತಿಯಾಗಿವೆ. ಕೆರೆ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲು ಇದು ಸೂಕ್ತ ಸಮಯ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ೩.೬೭.೭೩೯ ಫಲಾನುಭವಿಗಳು ಇದ್ದು, ಮಾಸಿಕ ೩೭.೫೮ ಕೋಟಿ ರೂ.ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಸದರಿ ವರ್ಷ ಮೃತಪಟ್ಟವರು ಹಾಗೂ ಅನರ್ಹ ೧೫.೩೮೭ ಫಲಾನುಭವಿಗಳ ಹೆಸೆರನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಸೆಪ್ಟೆಂಬರ್ ಮಾಹೆಯಿಂದ ಡಿಸೆಂಬರ್ ೧೭ರವರೆಗೂ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ೬೯.೭೯ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ೧೯೮ ಫಲಾನುಭವಿಗಳಿಗೆ ೧೮.೧೬ ಲಕ್ಷ ಪರಿಹಾರ ಧನ ವಿತರಣೆ ಮಾಡಲಾಗಿದೆ. ಶ್ರೀರಂಗಪಟ್ಟಣದಲ್ಲಿ ಸಿಡಿಎಸ್ ನಾಲೆ ಒಡೆದು ಉಂಟಾಗಿದ್ದ ಬೆಳೆ ಹಾನಿಗೂ ಪರಿಹಾರ ನೀಡಲಾಗಿದೆ. ೫.೫೦ ಕೋಟಿ ಮೊತ್ತದ ೪ ಕಾಮಗಾರಿಗಳಲ್ಲಿ ಒಂದು ಪೂರ್ಣಗೊಂಡಿದ್ದು ಉಳಿದ ೩ ಕಾಮಗಾರಿಗಳು ಶೇ. ೫೦ ರಷ್ಟು ನಡೆದಿವೆ ಎಂದರು.

ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ, ಮುಡಾ ಅಧ್ಯಕ್ಷ ಬಿ.ಪಿ ಪ್ರಕಾಶ್,ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಡಿಸಿ ಬಿ.ಸಿ. ಶಿವಾನಂದ ಮೂರ್ತಿ, ಕೆಡಿಪಿ ನಾಮ ನಿರ್ದೇಶಿತ ಸದಸ್ಯರಾದ ಸಿ.ಎಂ. ದ್ಯಾವಪ್ಪ, ನಟರಾಜು, ಆಶಾ ಭಾಗವಹಿಸಿದ್ದರು.

Tags:
error: Content is protected !!