ಮಂಡ್ಯ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಸವಣ್ಣ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರು ಸಮಾಜದ ಕ್ಷಮೆಯಾಚನೆ ಮಾಡಬೇಕು. ಸರ್ಕಾರ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ಬಂಧಿಸಬೇಕು ಎಂದು ಅಖಿಲ ಭಾರತ ವೀರಶೈವಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಆನಂದ್ ಆಗ್ರಹಿಸಿದರು.
ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ಸಮಸಮಾಜದ ನಿರ್ಮಾಣಕ್ಕೆ ಹೋರಾಡಿದ್ದು, ಎಲ್ಲ ರಾಜಕಾರಣಿಗಳು ಅವರ ಹೆಸರು ಬಳಸಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆ. ಅಂತವರಲ್ಲಿ ಯತ್ನಾಳ್ ಕೂಡ ಒಬ್ಬರಾಗಿದ್ದು, ಅವರ ಹೇಳಿಕೆ ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಎಂದು ಕಿಡಿ ಕಾರಿದರು.
ಒಂದು ಸಮುದಾಯದವನ್ನು ಮೆಚ್ಚಿಸಲು ವಿಶ್ವಗುರು ಎಂದು ಖ್ಯಾತಿ ಪಡೆದ ಬಸವಣ್ಣನವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವುದು ಸಮುದಾಯಕ್ಕೆ ಬೇಸರವುಂಟು ಮಾಡಿದ್ದು, ಯತ್ನಾಳ್ ಲಿಂಗಾಯತ ಸಮಾಜದ ಹಾಗೂ ಮನುಕುಲದ ಕ್ಷಮೆಯಾಚಿಸಬೇಕು. ತಮ್ಮ ಅವಿವೇಕತನವನ್ನು ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಕೆ.ಆರ್.ಪೇಟೆ ತಾ.ಅಧ್ಯಕ್ಷ ಸುಜೀಂದ್ರಕುಮಾರ್, ಪಾಂಡವಪುರ ತಾ.ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಜಯಣ್ಣ, ಮಂಡ್ಯ ತಾ.ಅಧ್ಯಕ್ಷ ಗುಳ್ಳಪ್ಪ, ಮಹದೇವಸ್ವಾಮಿ, ಹರೀಶ್ ಇದ್ದರು.





