Mysore
27
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮಕ್ಕಳಿಗೆ ಸಾಹಿತ್ಯದ ರುಚಿ ಬೆಳೆಸಿ : ಶೇಕ್ ತನ್ವಿರ್ ಆಸೀಫ್

ಮಂಡ್ಯ:  ಮಾನವನ ಜ್ಞಾನ, ಅರಿವು ಸುಖ-ದುಃಖಗಳನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಸುವ ಅತ್ಯಂತ ಪ್ರಮುಖ ಮಾರ್ಗ ಸಾಹಿತ್ಯವಾಗಿದೆ. ಆದ್ದರಿಂದ ಸಾಹಿತ್ಯದ ರುಚಿಯನ್ನು ಮಕ್ಕಳಿಗೆ ಬೆಳೆಸುವ ಕೆಲಸವಾಗಬೇಕು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವಿರ್ ಆಸೀಫ್  ತಿಳಿಸಿದರು.

ಅವರು ಗುರುವಾರ(ಜೂ.೬) ಮಂಡ್ಯ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನವಿಜ್ಞಾನ ಸಮಿತಿಯ ಸಹಯೋಗದಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ ಸಾಹಿತ್ಯ ಕ್ರೂಢೀಕರಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಸಣ್ಣ ವಯಸ್ಸಿನಿಂದಲೇ ಅವರ ಅಭಿವ್ಯಕ್ತಿಯನ್ನು ಹೊರ ಹಾಕುವ ವಿವಿಧ ಪ್ರಕಾರಗಳನ್ನು ಪರಿಚಯ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಅವರು ಹೆಚ್ಚಿನ ಪ್ರಪಂಚ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಅಂತಹ ಒಂದು ಪ್ರಯತ್ನ ಈ ಕಾರ್ಯಕ್ರಮದಲ್ಲಿ ಅಡಗಿದೆ ಎಂದರು.

ಇಂದಿನ ಕಾರ್ಯಗಾರದಲ್ಲಿ ಮಕ್ಕಳು ಬರೆದ ಕಥೆ, ಕವನ, ನಾಟಕಗಳನ್ನು ಕ್ರೂಡೀಕರಣ ಮಾಡಿ ಅತ್ಯುತ್ತಮವಾದವುಗಳನ್ನು ರಾಜ್ಯ ಹಂತಕ್ಕೆ ಕಳಿಸುವ ಕಾರ್ಯ ನಡೆಯುತ್ತಿದೆ. ನಮ್ಮ ಜಿಲ್ಲೆಯ ಮಕ್ಕಳು ಬರೆದ ಸಾಹಿತ್ಯ ರಾಜ್ಯಮಟ್ಟದಲ್ಲಿ ಹೆಚ್ಚಾಗಿ ಆಯ್ಕೆಯಾಗಲೆಂದು ಹಾರೈಸುತ್ತಾ, ಕಾರ್ಯಗಾರ ಉದ್ಘಾಟನಾ ಸಂದರ್ಭದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ರಾಜ್ಯ ಸಂಚಾಲಕರಾದ ಟಿ ಎ ಪ್ರಶಾಂತ್ ಬಾಬು ಪ್ರಾಸ್ತವಿಕ ಮಾತನಾಡಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಕ್ಕಳಿಗೆ ಸ್ಪಂದಿಸುವ ಸ್ಥಳೀಯ ಆಡಳಿತ ಎಂಬ ಯೋಜನೆ ಅಡಿಯಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿಯ ಸಹಯೋಗದೊಂದಿಗೆ ಮಂಡ್ಯ ಜಿಲ್ಲೆಯ ಐದು ತಾಲೂಕುಗಳಲ್ಲಿ ಮಕ್ಕಳ ಸಾಹಿತ್ಯ ಸಂಭ್ರಮ ಹಬ್ಬವನ್ನು ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ 500 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಸುಮಾರು 2000 ಕ್ಕೂ ಹೆಚ್ಚು ಪುಟಗಳ ನವೀನ ಸಾಹಿತ್ಯವನ್ನು ಸೃಜನೆ ಮಾಡಿರುತ್ತಾರೆ. ಈ ಸಾಹಿತ್ಯದ ಕ್ರೂಢೀಕರಣ ಹಾಗೂ ರಾಜ್ಯಮಟ್ಟದ ಪುಸ್ತಕ ಪ್ರಕಟಣೆಗೆ ಸಾಹಿತ್ಯದ ಆಯ್ಕೆಗಾಗಿ ಈ ಒಂದು ಕ್ರೂಢೀಕರಣ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಮಂಡ್ಯ ಜಿಲ್ಲಾ ಅಧ್ಯಕ್ಷರಾದ ಪ್ರೊ. ಎಸ್. ರೇವಣ್ಣ ಅವರು ಮಾತನಾಡಿ ಮಕ್ಕಳ ಸಾಹಿತ್ಯ ಸಂಭ್ರಮ ಮಕ್ಕಳಿಂದಲೇ ಲೇಖನಗಳನ್ನು ಬರೆಸುವ ಅತ್ಯಂತ ನವೀನ ಚಟುವಟಿಕೆಯಾಗಿದ್ದು, ಮಕ್ಕಳಲ್ಲಿ ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ತಾಲೂಕುಗಳಲ್ಲಿನ ಆಯ್ದ 15 ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಯೋಜನಾಧಿಕಾರಿ ಎಸ್ ಧನುಷ್, ಜಿಲ್ಲಾ ಪಂಚಾಯತ್ ನ ಯೋಜನಾ ಅಂದಾಜು ಮೌಲ್ಯ ಮಾಪನಾಧಿಕಾರಿ ಎಂ ಶಿವಮ್ಮ, ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕರಾದ ನಂಜರಾಜು ಹಾಗೂ ವಿವಿಧ ತಾಲೂಕುಗಳಿಂದ ಆಗಮಿಸಿದ್ದ 30 ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

Tags: