Mysore
27
overcast clouds
Light
Dark

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ: ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸಿ: ಡಾ. ಕಾಂತರಾಜು

ಮಂಡ್ಯ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದೆ. ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ ಸೊಳ್ಳೆಗಳ ನಿಯಂತ್ರಣ ಅಸಾಧ್ಯವಾಗುತ್ತದೆ. ಆಗಾಗಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದು ಮಂಡ್ಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಕಾಂತರಾಜು ಹೇಳಿದರು.

ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಗುರುವಾರ(ಜು.11) ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ವಿಶ್ವ ಮಲೇರಿಯಾ ದಿನಾಚರಣೆ ಮತ್ತು ಡೆಂಘೀ ವಿರೋಧ ಮಾಸಾಚರಣೆ ಪ್ರಯುಕ್ತ ಮಲೇರಿಯಾ ಮತ್ತು ಡೆಂಘೀ ನಿಯಂತ್ರಣ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಡ್ವೋಕೆಸಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಡೆಂಗ್ಯೂ ಜ್ವರವು ವೈರಸ್‌ನಿಂದ ಉಂಟಾಗುವ ಖಾಯಿಲೆಯಾಗಿದ್ದು, ಈಡಿಸ್ ಈಜಿಪ್ಟಯ್ ಸೊಳ್ಳೆಯ ಕಚ್ಚುವಿಕೆಯಿಂದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ ಹಾಗೂ ಕೇವಲ 500 ಎಂ ಎಲ್ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡಬಲ್ಲವು. ಈಜಿಪ್ಟಯ್ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಮನೆಯ ಒಳಗೆ ಹಾಗೂ ಹೊರಗೆ ನೀರನ್ನು ಶೇಖರಿಸುವ ನೀರು, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆ, ಉಪಯೋಗಿಸದ ಹೊರಳು ಕಲ್ಲು, ಏರ್ ಕೂಲರ್ ಗಳು, ಡ್ರಮ್, ಬ್ಯಾರೆಲ್, ಬಳಸದ ಟೈರುಗಳು, ಎಳನೀರು ಚಿಪ್ಪುಗಳು, ಒಡೆದ ಬಾಟಲ್ ಗಳು, ಘನತ್ಯಾಜ್ಯ ವಸ್ತುಗಳು ಮುಂತಾದ ಕಡೆ ಉತ್ಪತ್ತಿಯಾಗುತ್ತವೆ. ಟ್ಯಾಂಕಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಿ. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದರು.

ತೀವ್ರ ಜ್ವರ, ವಿಪರಿತ ತಲೆನೋವು, ಕಣ್ಣುಗುಡ್ಡೆ ಹಿಂಭಾಗದಲ್ಲಿ ವಿಪರೀತ ನೋವು, ಕೀಲುಗಳ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ರಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗ್ಯೂ ಜ್ವರದ ಮುಖ್ಯ ಲಕ್ಷಣವಾಗಿವೆ. ಡೆಂಗ್ಯೂ ಅಘಾತಕಾರಿ ಜ್ವರವಾಗಿದ್ದು, ಇದ್ದಕ್ಕಿದ್ದಂತೆ ಸಾಧಾರಣದಿಂದ ತೀವ್ರ ಜ್ವರ ಕಣ್ಣುಗಳು ಸ್ನಾಯುನೋವು, ಕೀಲುಗಳಲ್ಲಿ ಅಸಾಧ್ಯ ನೋವಿನಿಂದ ಕೈಕಾಲುಗಳನ್ನು ಆಡಿಸಲು ಕಷ್ಟವಾಗುವುದು ಹಾಗೂ ಕೆಲವರಲ್ಲಿ ಕೀಲುಗಳು ಬಾವು ಕಾಣಿಸಿಕೊಳ್ಳುತ್ತದೆ. ಆದರೆ ಇದು ಮಾರಣಾಂತಿಕವಲ್ಲ ಎಂದು ವಿವರಿಸಿದರು.

ಡೆಂಗ್ಯೂ ಜ್ವರ ರೋಗಿಗಳಿಗೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ, ರೋಗದ ಲಕ್ಷಣಗಳಿಗನುಸಾರವಾಗಿ ವೈದರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು. ಉಚಿತ ಚಿಕಿತ್ಸೆಗಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 297 ಡೆಂಗ್ಯೂ ಪ್ರಕರಣಗಳು ದಾಖಲು
2024 ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಜುಲೈ 10 ರವರೆಗೆ ಜಿಲ್ಲೆಯಲ್ಲಿ ಒಟ್ಟು 297 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಮಂಡ್ಯ ತಾಲ್ಲೂಕಿನ ನಗರಪ್ರದೇಶದಲ್ಲಿ – 37, ಮಂಡ್ಯ ಗ್ರಾಮಾಂತರ – 119, ಮದ್ದೂರು – 40 , ಮಳವಳ್ಳಿ -18, ಪಾಂಡವಪುರ – 16, ಶ್ರೀರಂಗಪಟ್ಟಣ – 34, ಕೆ. ಆರ್. ಪೇಟೆ – 17, ನಾಗಮಂಗಲ ತಾಲ್ಲೂಕಿನಲ್ಲಿ – 16 ಪ್ರಕರಣಗಳು ದಾಖಲಾಗಿವೆ. ಮಂಡ್ಯ ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ ಎಂದರು.

ಎಲ್ಲೆಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳು ಕಂಡು ಬರುತ್ತದೆಯೋ ಆ ಪ್ರದೇಶಗಳಲ್ಲಿ ಆಶಾ ಕರ್ತೆಯರ ಮೂಲಕ ತಿಳುವಳಿಕೆ ಹಾಗೂ ಸ್ವಚ್ಛತಾ ಕ್ರಮವನ್ನು ತಿಳಿಸಲಾಗುತ್ತಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಡೆಂಗ್ಯೂ ಹಾಗೂ ಮಲೇರಿಯಾ ರೋಗದ ನಿಯಂತ್ರಣದ ಬಗ್ಗೆ ಭಿತ್ತಿಪತ್ರಗಳನ್ನು ನೀಡುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ.

ಶಾಲಾ – ಕಾಲೇಜುಗಳಿಗೆ ಭೇಟಿ ನೀಡಿ ಡೆಂಗ್ಯೂ – ಮಲೇರಿಯಾ ತಡೆಗಟ್ಟುವ ಬಗ್ಗೆ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸುವಂತೆ ತಿಳಿಸಲಾಗುತ್ತಿದೆ ಎಂದರು.

ಸೊಳ್ಳೆಗಳಿಂದ ಡೆಂಗಿ, ಚಿಕನ್ ಗುನ್ಯಾ, ಮೆದುಳು ಜ್ವರ, ಝೀಕಾ, ಮಲೇರಿಯಾ, ಆನೆಕಾಲು ರೋಗಗಳು ಹರಡುತ್ತವೆ.

ಮಲೇರಿಯಾ ರೋಗವು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಚಳಿ ಜ್ವರ, ನಡುಕ, ತಲೆನೋವು, ವಾಕರಿಕೆ, ವಾಂತಿ, ಸ್ನಾಯುನೋವು ಮಲೇರಿಯಾ ರೋಗದ ಲಕ್ಷಣವಾಗಿದೆ. ಮಲೇರಿಯಾದ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.

2025 ನೇ ವರ್ಷದೊಳಗೆ ನಾವು ರಾಜ್ಯಾದ್ಯಂತ ಮಲೇರಿಯಾವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಮಾಧ್ಯಮ ಪ್ರತಿನಿಧಿಗಳು ಡೆಂಗ್ಯೂ ಹಾಗೂ ಮಲೇರಿಯಾ ರೋಗವನ್ನು ಹೋಗಲಾಡಿಸುವುದಕ್ಕೆ ಸಹಕರಿಸಿ. ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಡೆಂಗ್ಯೂ ಹಾಗೂ ಮಲೇರಿಯಾ ರೋಗದ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಕೀಟಶಾಸ್ತ್ರತಜ್ಞೆ ಜಾನೆಟ್ ಮೆಂಜೇಸ್, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.