Mysore
27
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಬೆಲೆ ಏರಿಕೆ ಹಿಂಪಡೆಯಲು ಆಗ್ರಹ

ಮಂಡ್ಯ: ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತದಿಂದ ಕೂಡಿದ ರಾಜ್ಯ ಸರ್ಕಾರ ಬೆಲೆಗಳ ಏರಿಕೆ ಮಾಡಿಕೊಂಡು ತಮ್ಮ ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮತಿ ಪಕ್ಷದ ರಾಜ್ಯ ಪ್ರಧಾನಕಾರ್ಯದರ್ಶಿ ದೀಪಕ್.ಸಿ.ಎನ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿ ಅಗತ್ಯ ವಸ್ತುಗಳು, ಸರ್ಕಾರಿ ಸೇವಾ ಶುಲ್ಕಗಳು ಏರಿಕೆ ಮಾಡಿರುವುದು, ಸರ್ಕಾರದ ಬೊಕ್ಕಸ ಖಾಲಿಯಾಗಿ ಎಂಬುದನ್ನು ತೋರುತ್ತದೆ. ಗ್ಯಾರೆಂಟಿಗೆ ಹಣ ಹೊಂದಿಸಲು ನಿರಂತರ ಬೆಲೆ ಏರಿಕೆಗೆ ಕಾಂಗ್ರೆಸ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಬೆಲೆ ಏರಿಕೆ ಮಾಡಿಕೊಂಡು ೪ ಲಕ್ಷ ಕೋಟಿಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ ಮಂಕುಬೂದಿ ಎರಚುತಿದ್ದು, ಸುಮಾರು ೪೦ ಸಾವಿರ ಕೋಟಿ ಹಣ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದು, ಬಜೆಟ್‌ನಲ್ಲಿ ತೋರಿಸದೇ ಇದ್ದು, ಅಭಿವೃದ್ಧಿ ಹಾಗೂ ಸಣ್ಣ ಕಾಮಗಾರಿಗಳಿಗೂ ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅನುದಾನದ ಕೊರತೆಯಿಂದಾಗಿ ಶಾಸಕರುಗಳು ಪರ್ಸೆಂಟೇಜ್ ಸಿಗದೆ ಪರದಾಡುತ್ತಿದ್ದಾರೆ, ಸರ್ಕಾರಿ ಕಛೇರಿಗಳು ವಸೂಲಿ ಕೇಂದ್ರಗಳಾಗಿವೆ. ಅಕ್ರಮ ಮರಳು ಗಣಿಗಾರಿಕೆ, ಕ್ರಷರ್‌ಗಳಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಸಾಧ್ಯವಾಗದೇ ನಿರಂತರ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯದ ಸಚಿವರುಗಳು ಮತ್ತೆ ತಮ್ಮಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲವೆಂಬಂತೆ ಮುಖ್ಯಮಂತ್ರಿ ಸ್ಥಾನಕ್ಕೆ ನಾಮುಂದು, ತಾಮುಂದು ಎಂದು ಲಾಭಿ ನಡೆಸುತ್ತಿದ್ದು, ರಾಜ್ಯದ ಅಭಿವೃದ್ಧಿ, ಜನಪರ ಕಾಳಜಿಯೇ ಇಲ್ಲದೆ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸರ್ಕಾರ ಕೂಡಲೇ ಭಷ್ಟಾಚಾರ, ದುರಾಡಳಿತವನ್ನು ನಿಲ್ಲಿಸಿದೇ ಹೋದಲ್ಲಿ ತಮ್ಮ ಗ್ಯಾರೆಂಟಿಯನ್ನೂ ನಿಲ್ಲಿಸು ಸ್ಥಿತಿಗೆ ತಲುಪಲಿದ್ದು, ದಕ್ಷ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಲು ಕ್ರಮ ವಹಿಸಿ, ತಕ್ಷಣವೇ ಬೆಲೆ ಏರಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ರಮೇಶ್ ಗೌಡ, ಮಲ್ಲೀಶ್, ಕಾಂತರಾಜು, ಶಶಿಧರ್, ರವೀಂದ್ರ, ಜಯಪ್ರಕಾಶ್ ಇದ್ದರು.

Tags:
error: Content is protected !!