Mysore
30
scattered clouds
Light
Dark

ಜಿಲ್ಲೆಯಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ: ಪಿ ರವಿಕುಮಾರ್

ಮಂಡ್ಯ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಡೆಂಗ್ಯೂ ಜ್ವರ ತಡೆಗಟ್ಟಲು ಪರಿಣಾಮಕಾರಿಯಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಸೂಚಿಸಿದರು.

ಶುಕ್ರವಾರ(ಜು.12) ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ 2024 – 25 ನೇ ಸಾಲಿನ ಮಂಡ್ಯ ತಾಲ್ಲೂಕು ಪಂಚಾಯತ್ ತ್ರೈಮಾಸಿಕ ಕೆ. ಡಿ. ಪಿ. ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಾಮಾನ್ಯರಲ್ಲಿ ಡೆಂಗ್ಯೂ ಹೆಚ್ಚುತ್ತಿದ್ದು, ಪ್ರಸ್ತುತ ಮಂಡ್ಯ ನಗರ ಪ್ರದೇಶದಲ್ಲಿ – 37, ಮಂಡ್ಯ ಗ್ರಾಮಾಂತರದಲ್ಲಿ – 119 ಪ್ರಕರಣಗಳಿವೆ. ಈ ಬಗ್ಗೆ ಆರೋಗ್ಯ ಇಲಾಖೆಯು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಏನೇನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಆಶಾ ಕಾರ್ಯಕರ್ತೆಯರಿಂದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಡೆಂಗ್ಯೂ ಜ್ವರದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕ್ರಮ ವಹಿಸಬೇಕು. ಈ ಹಿಂದೆ ಕೊರೋನ ಸಂದರ್ಭದಲ್ಲಿ ಹೇಗೆ ಶುಚಿತ್ವ ಕಾಪಾಡುತ್ತಿದ್ದರೋ ಅದೇ ರೀತಿಯಲ್ಲಿ ಎಲ್ಲಾ ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದರು.

ಜಿಲ್ಲೆಯಲ್ಲಿನ ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡುವಲ್ಲಿ ಯಾವುದೇ ತೊಂದರೆಯಾಗಬಾರದು. ಮಳೆಯಾಗುತ್ತಿರುವ ಹಿನ್ನೆಲೆ ನಾಲೆಗಳಲ್ಲಿ ನೀರು ಬಿಡಲಾಗುತ್ತಿದ್ದು, ರೈತರು ಕೃಷಿಯಲ್ಲಿ ತೊಡಗಬಹುದು ಎಂದು ಹೇಳಿದರು.

ಪ್ರಸ್ತುತ ಬಿತ್ತನೆ ಬೀಜದ ಸಂಗ್ರಹಣೆ ಎಷ್ಟಿದೆ ಎಂಬುದನ್ನು ವಿಚಾರಿಸಿದ ಶಾಸಕರು, ರೈತರ ವಿಮೆ, ಬೆಳೆ ಪರಿಹಾರದ ಬಗ್ಗೆ ಕೃಷಿ ಇಲಾಖೆಯೊಂದಿಗೆ ಚರ್ಚಿಸಿದರು.

2024 ನೇ ಸಾಲಿಗೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಶಾಲಾ ಸಮವಸ್ತ್ರ, ಪಠ್ಯ ಪುಸ್ತಕಗಳನ್ನು ನೀಡಲಾಗಿದೆ. ಜೊತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಖುದ್ದು ತಾವೇ ಶಾಲಾ ಬ್ಯಾಗ್ ಅನ್ನು ನೀಡುವುದಾಗಿ ತಿಳಿಸಿದ ಅವರು, ಶಿಕ್ಷಕರು ಸರ್ಕಾರಿ ಶಾಲೆಗೆ ಇನ್ನೂ ಹೆಚ್ಚಿನ ಪ್ರವೇಶಾತಿ ಆಗುವಂತೆ ಪೋಷಕರ ಮನವೊಲಿಸಿ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಿಕ್ಷಣ ಇಲಾಖೆಗೆ ತಿಳಿಸಿದರು.

ಮಂಡ್ಯ ತಾಲ್ಲೂಕಿನಲ್ಲಿ ದುರಸ್ತಿ ಪಡಿಸಬೇಕಿರುವ ಸರ್ಕಾರಿ ಶಾಲೆಗಳ ಬಗ್ಗೆ ವರದಿ ಸಲ್ಲಿಸಿ. ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರಿ ಜಾಗವನ್ನು ಹುಡುಕಿ ಅಂಗನವಾಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ‌ನಿವೇಶನ ಹಾಗೂ ವಸತಿ ರಹಿತ ಬಡ ಜನರಿಗೆ ಸರ್ಕಾರದ ಜಾಗವನ್ನು ಗುರುತಿಸಿ ವಸತಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಆಹಾರದ ಬಗ್ಗೆ ವಿಚಾರಿಸಿದರು. ಎಲ್ಲಾ ವಸತಿ ನಿಲಯಗಳಲ್ಲಿ ಹೆಚ್ಚಿನ ಪೋಷಕಾಂಶವಿರುವ ಶುಚಿ – ರುಚಿಯಾದ ಊಟವನ್ನು ನೀಡಬೇಕು ಎಂದು ಹೇಳಿದರು.

ತಾಲ್ಲೂಕಿನಲ್ಲಿ ಯಾವ ಭಾಗದಲ್ಲಿ ಅಂಬೇಡ್ಕರ್ ಭವನದ ನಿರ್ಮಾಣವೂ ಅರ್ಧಕ್ಕೆ ನಿಂತಿದೆಯೋ ಅವುಗಳನ್ನು ಶೀಘ್ರವೇ ಪೂರ್ಣಗೊಳಿಸಲು ಅನುದಾನವನ್ನು ನೀಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು ಡಿಜಿಟಲ್ ಗ್ರಂಥಾಲಯ ಮಾಡುವ ಉದ್ದೇಶದಿಂದ ಸರ್ಕಾರದಿಂದ ಗ್ರಾಮ ಪಂಚಾಯಿತಿಗಳಿಗೆ ಬಂದಿರುವ ಸ್ಮಾರ್ಟ್ ಮೊಬೈಲ್ ಹಾಗೂ ಕಂಪ್ಯೂಟರ್ ಅನ್ನು ವಿತರಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ ಎಂ ಬಾಬು, ತಾಲ್ಲೂಕು ಪಂಚಾಯತ್ ಸಿಇಒ ವೀಣಾ, ತಹಶಿಲ್ದಾರ್ ಶಿವಕುಮಾರ್ ಬಿರಾದಾರ್, ಡಿವೈಎಸ್ ಪಿ ರಮೇಶ್ ಸೇರಿದಂತೆ ಇನ್ನಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.