ಮಂಡ್ಯ: ರೈತರ ಜೀವನಾಡಿ ಕೆಆರ್‌ಎಸ್ ಭರ್ತಿಗೆ ದಿನಗಣನೆ ಆರಂಭವಾಗಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಡ್ಯಾಮ್ ತನ್ನಗರಿಷ್ಠ ಮಟ್ಟ 124 ಅಡಿ ತಲುಪಲಿದೆ.
124 ಅಡಿ ಎತ್ತರದ ಜಲಾಶಯದಲ್ಲಿ ಈಗ 122 ಅಡಿ ನೀರು ಸಂಗ್ರಹವಾಗಿದ್ದು, 69,617 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.
ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆ ನಾಳೆ ಅಂದರೆ ಜುಲೈ 22 ರಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಕೆಆರ್‌ಎಸ್ ವಿಕ್ಷಣೆ ಮಾಡಲಿದ್ದಾರೆ.
ಕಳೆದ ಬಾರಿ ಮಳೆಯಿಲ್ಲದೆ ಕೆಆರ್‌ಎಸ್ ತುಂಬದೆ ಕಾವೇರಿಗೆ ಭಾಗಿನ ಅರ್ಪಿಸಿರಲಿಲ್ಲ. ಆದರೆ ಈ ಬಾರಿ ಡ್ಯಾಮ್ ಹಲ್ನೋರೆಯಂತೆ ಉಕ್ಕುತ್ತಿದ್ದು, ಭರ್ತಿಗೆ ಕೇವಲ ಇನ್ನು 2 ಅಡಿ ಬಾಕಿ ಮಾತ್ರ ಉಳಿದಿದೆ. ಹೀಗಾಗಿ ಜುಲೈ27 ರಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸಂಸದರು ಹಾಗೂ ಶಾಸಕರು ಕಾವೇರಿ ನದಿಗೆ ಬಾಗಿನ ಅರ್ಪಿಸಲಿದ್ದಾರೆ.
ಕೆಆರ್‌ಎಸ್ ಡ್ಯಾಮ್‌ನ ಒಳ ಹರಿವಿನ ಪ್ರಮಾಣ ನೋಡಿಕೊಂಡು ಹೊರಹರಿವು ಹೆಚ್ಚು ಮಾಡಲು ಕಾವೇರಿ ನಿರಾವರಿ ನಿಗಮ ನಿರ್ಧಾರ ಮಾಡಿದ್ದು, ಇಂದು ಮತ್ತೆ 50ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆ ಕಾವೇರಿ ಕೊಳ್ಳದ ಜಲಪಾತಗಳು ಭೋರ್ಗರೆಯುತ್ತಿವೆ.
ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆ ಸಂದೇಶವನ್ನು ಜಿಲ್ಲಾಡಳಿತ ರವಾನಿಸಿದ್ದು, ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಆಗುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ತಗ್ಗು ಪ್ರದೇಶಗದ ಜನರು ಮುಂಜಾಗ್ರತಾ ಕ್ರಮವಾಗಿ ಜನಜಾನುವಾರುಗಳು ನದಿಗೆ ಇಳಿಸದಂತೆ ಆದೇಶ ನೀಡಲಾಗಿದೆ.





