ಮಂಡ್ಯ: ವಿಸಿ ನಾಲೆಗೆ ಕಡೆಗೂ ತಡೆಗೋಡೆ ನಿರ್ಮಾಣ ಭಾಗ್ಯ ಒದಗಿಬಂದಿದ್ದು, ಈಗ ವಾಹನ ಸವಾರರು ನಿರಾಳರಾಗಿದ್ದಾರೆ.
ವಿಸಿ ನಾಲೆಯಲ್ಲಿ ಕಳೆದ ಆರು ವರ್ಷಗಳಿಂದ ನಡೆದ ಸಾಲು ಸಾಲು ದುರಂತಗಳಿಂದ ಜನರು ಈ ನಾಲೆಗೆ ಸಾವಿನ ನಾಲೆ ಎಂಬ ಪಟ್ಟ ಕಟ್ಟಿದ್ದರು.
ವಿಸಿ ನಾಲೆಯ ದಡದ ರಸ್ತೆ ಅತೀ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದರು.
ನಾಲೆಗೆ ತಡೆಗೋಡೆ ಇಲ್ಲದಿರುವುದೇ ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು. ಈ ಎಲ್ಲಾ ಅವಘಡಗಳು ಸಂಭವಿಸಿದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಿದೆ.
ಇದಲ್ಲದೇ ಡೇಂಜರ್ ಝೋನ್‌ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಇನ್ನು ಮುಂದೆ ಯಾವುದೇ ಆತಂಕವಿಲ್ಲದೇ ವಾಹನ ಸವಾರರು ವಿಸಿ ನಾಲೆಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.





