Mysore
28
scattered clouds

Social Media

ಭಾನುವಾರ, 10 ನವೆಂಬರ್ 2024
Light
Dark

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು: ಸಿ.ಟಿ ರವಿ

ಮಂಡ್ಯ: ದೇಶದಲ್ಲಿ ಅರಾಜಕತೆ ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಮಾಜಿ ಸಚಿವ ಖುರ್ಷಿದ್ ಆಲಮ್ ಖಾನ್ ಹಾಗೂ ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ  ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹ ಪಡಿಸಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಾಂಗ್ಲಾದ ಪರಿಸ್ಥಿತಿ ಭಾರತದಲ್ಲಿಯೂ ಆಗಲಿದೆ ಎಂದು ಖುರ್ಷಿದ್ ಆಲಂ ಖಾನ್ ಮತ್ತು ಸಜ್ಜನ್ ಸಿಂಗ್ ವರ್ಮ ಅವರು ನೀಡಿರುವ ಹೇಳಿಕೆ ಅರಾಜಕತೆ ಸೃಷ್ಟಿಸಲು ಹೂಡಿರುವ ಸಂಚಾಗಿದೆ. ಹೀಗಾಗಿ ಇವರ ವಿರುದ್ಧ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದರು.

ನೆರೆ ದೇಶವಾದ ಬಾಂಗ್ಲಾದಲ್ಲಿ ವಿದ್ಯಾರ್ಥಿಗಳು ಮೀಸಲಾತಿ ಬಗ್ಗೆ ಚಳುವಳಿ ನಡೆಸಿದ್ದಾರೆ. ಹೆಚ್ಚುವರಿ ಮೀಸಲಾತಿಯನ್ನು ನ್ಯಾಯಾಲಯ ರದ್ದು ಮಾಡಿದ್ದರೂ ಚಳುವಳಿ ಮುಂದುವರೆದಿದೆ ಎಂದರು. ಬಾಂಗ್ಲಾದ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಸಹ ಚಳುವಳಿ ನಿಲ್ಲದೆ ಹೊಸ ರೂಪ ಪಡೆದುಕೊಂಡಿದ್ದು ಆ ದೇಶದ ಅಲ್ಪಸಂಖ್ಯಾತರನ್ನೇ ಗುರಿ ಮಾಡಲಾಗಿದೆ. ಅಲ್ಪಸಂಖ್ಯಾತ ದೇವಾಲಯಗಳು ದ್ವಂಸಗೊಳಿಸಲಾಗುತ್ತಿದೆ ಎಂದು ತಿಳಿಸಿದರು .

ಬಾಂಗ್ಲಾದಲ್ಲಿ ನಡೆದಿರುವ ಘಟನೆಯ ಬಗ್ಗೆ ಕೇಂದ್ರ ಮಾಜಿ ಸಚಿವ ಖುರ್ಷಿದ್ ಆಲಂ ಖಾನ್ ಮತ್ತು ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮ ಅವರು ಬಾಂಗ್ಲಾ ರೀತಿಯಲ್ಲಿಯೇ ಭಾರತದಲ್ಲಿ ಕ್ಷೋಭೆ, ಸಂಘರ್ಷ ನಡೆಯುವ ಕಾಲ ದೂರವಿಲ್ಲ ಎಂದು ಹೇಳಿಕೆ ನೀಡಿದ್ದು ಇದು ಭಾರತದಲ್ಲಿ ಅರಾಜಕತೆ ಉಂಟುಮಾಡುವ ಅನುಮಾನಕ್ಕೆ ಕಾರಣವಾಗಿದೆ. ಆದಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಾಂಗ್ಲಾದ ಪ್ರಧಾನಿಗೆ ಆದ ಗತಿಯೇ ಭಾರತದ ಪ್ರಧಾನಿಗೆ ಆಗುತ್ತದೆ ಎಂದು ನೀಡಿರುವ ಹೇಳಿಕೆ ಕಾಕತಾಳೀಯವಲ್ಲ. ದೇಶದಲ್ಲಿ ಸಂಚು ರೂಪಿಸುತ್ತಿರುವ ಬಗ್ಗೆ ಅನುಮಾನವಿದೆ. ಸರ್ಕಾರವನ್ನು ಬೀಳಿಸುವ ಸಂಚನ್ನು ನಡೆಸಲಾಗುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ .ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸಿಎಎ ಮತ್ತು ಕೃಷಿ ಕಾಯ್ದೆ ರೈತರು ಮತ್ತು ಇತರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತರಲಾಗಿದೆ. ಆದರೆ ಈ ಕಾಯ್ದೆಯನ್ನು ವಿರೋಧಿಸಿ ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ್ದಾರೆ .ಆಗಲು ಸಂಚು ನಡೆದಿದ್ದು ಇದು ಹೊಸದೇನಲ್ಲ ಎಂದು ತಿಳಿಸಿದರು .

ಖುರ್ಷಿದ್ ಆಲಂ ಖಾನ್ , ಸಜ್ಜನ್ ಸಿಂಗ್ ವರ್ಮ ಅವರ ವಿರುದ್ಧ ಕೂಡಲೇ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು. ರಾಹುಲ್ ಗಾಂಧಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಬೇಕು .ಅಲ್ಲದೆ ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ನಾರಾಯಣಗೌಡ ,ಶಾಸಕ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಡಾಕ್ಟರ್ ಇಂದ್ರೇಶ್, ಬಿಜೆಪಿ ವಕ್ತಾರಾ ಸಿಟಿ ಮಂಜು, ಪ್ರಧಾನ ಕಾರ್ಯದರ್ಶಿ ವಿವೇಕ್, ಮಾಧ್ಯಮ ಪ್ರಮುಖ್ ನಾಗನಂದ ಉಪಸ್ಥಿತರಿದ್ದರು.

Tags: