ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಹಾಗೂ ಜನಪರ ಬಜೆಟ್ ಮಂಡಿಸಿದ್ದು, ಗ್ಯಾರೆಂಟಿ ಯೋಜನೆಗಳ ಜೊತೆಗೆ ಕೃಷಿ ಕ್ಷೇತ್ರಕ್ಕೆ ಸಿಂಹ ಪಾಲು ನೀಡಿರುವುದಕ್ಕೆ ಮಂಡ್ಯ ಜಿಲ್ಲಾ ಕಾಂಗ್ರೆಸ್, ಶಾಸಕರು, ಸಚಿವರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಹಾಗು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಕ್ಷೇತ್ರಕೆಕ ೫೩,೧೧೭ ಕೋಟಿ ರೂ ಅನುದಾನ ಮೀಸಲಿಟ್ಟು, ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಿಗೆ ಅತ್ಯಂತ ಪ್ರೋತ್ಸಾಹ ನೀಡಿದ್ದಾರೆ ಎಂದರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಮೂಲಭೂತ ಸೌಕರ್ಯಕ್ಕೆ ೨೫ ಕೋಟಿ ನೀಡಿ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕೃಷಿ ವಿವಿಯಲ್ಲಿ ತರಗತಿ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿದ್ದು, ಇದಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೊಂಕು ತೋರಿ, ಮಂಡ್ಯ ಅವರಿಗೆ ಮತದಾನಕ್ಕೆ ಮಾತ್ರ ಅಭಿವೃದ್ಧಿಗೆ ಬೇಕಿಲ್ಲ ಎಂಬುದನ್ನು ತೋರಿದ್ದಾರೆ ಎಂದು ಖಂಡಿಸಿದರು.
ಅನಾರೋಗ್ಯ ಸಂಬಂಧ ವೀಲ್‌ಚೇರ್‌ನಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಛಲವಾದಿ ನಾರಾಯಣಸ್ವಾಮಿ ತಮ್ಮ ಹುದ್ದೆಯ ಜವಾಬ್ದಾರಿ ಅರಿಯದೆ ಮನ ಬಂದಂತೆ ಮಾತನಾಡಿದ್ದು, ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ತಕ್ಷಣವೇ ಅಂಬೇಡ್ಕರ್ ಮತ್ತು ಭಗತ್‌ಸಿಂಗ್ ಫೋಟೊ ತೆಗೆದಿರುವುದಕ್ಕೆ ಉತ್ತರ ನೀಡಲಿ ಎಂದು ತಾಕೀತು ಮಾಡಿದರು.
ಮಾಜಿ ಸಚಿವ, ಮಾಜಿ ಲೋಕಸಭಾ ಸದಸ್ಯ ಸಿ.ಎಸ್.ಪುಟ್ಟರಾಜು ಗೃಹಲಕ್ಷ್ಮಿ ಹಣವನ್ನು ಮಹಿಳೆಯರಿಗೆ ಸಕಾಲಕ್ಕೆ ಹಾಕಿ ಎಂದು ಪ್ರತಿಭಟನೆ ಮಾಡಿರುವು ಹಾಸ್ಯಾಸ್ಪದವಾಗಿದೆ. ಕಾಂಗ್ರೆಸ್ ಪಕ್ಷದ ಏಳಿಗೆ ಸಹಿಸದೇ ಅನಾವಶ್ಯಕವಾಗಿ ತಾವು ಮತಿಭ್ರಮಣೆಗೊಂಡು, ಜನರಲ್ಲಿ ಗೊಂದಲ ಮೂಡಿಸಿ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ದಲಿತ ಸಮುದಾಯದ ಎಡಗೈ- ಬಲಗೈ ಜಾತಿಗಳಿಗೆ ಅನ್ಯಾಯವಾಗದಂತೆ ಒಳಮೀಸಲಾತಿ ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರ ಆಯೋಗ ರಚಿಸಿದ್ದು, ಇದನ್ನು ಸರಿಯಾಗಿ ತಿಳಿಯದೆ ಡಾ.ಹೆಚ್.ಸಿ.ಮಹದೇವಪ್ಪ ರಾಜೀನಾಮೆ ಕೇಳುವುದು ಸರಿಯಲ್ಲ. ಅಂಬೇಡ್ಕರ್‌ರ ಆಶಯದಂತೆ ದಲಿತರಿಗೆ ಕಾಂಗ್ರೆಸ್ ಪಕ್ಷ ನ್ಯಾಯ ನೀಡಿದೆ ಎಂದು ಸಮರ್ಥಿಸಿಕೊಂಡರು.
ಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎನ್.ಆರ್.ಚಂದ್ರಶೇಖರ್, ಎಸ್ಸಿ/ಎಸ್ಟಿ ಉಪಾಧ್ಯಕ್ಷ ವಿಜಿಕುಮಾರ್ ಚಂದಗಾಲು, ಸುಂಡಹಳ್ಳಿ ಮಂಜುನಾಥ್, ವಿಜಯಲಕ್ಷ್ಮಿ ರಘುನಂದನ್, ಅಪ್ಪಾಜಿ, ಸಾತನೂರು ಕೃಷ್ಣ, ಬೋರೇಗೌಡ ಇದ್ದರು.





