ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರನ್ನು ತನ್ನ ರಾಜಕೀಯ ರಾಜಕೀಯ ಸ್ವಾರ್ಥಕ್ಕಾಗಿ ನೆರೆಯ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾರಿಕೊಂಡಿದೆ. ಇಲ್ಲಿ ಮೇಕೆದಾಟು ಯೋಜನೆ ಕೈಗೊಳ್ಳುತ್ತೇವೆ ಎನ್ನುತ್ತಾರೆ, ಕಾವೇರಿಯನ್ನು ಕಾಪಾಡುತ್ತೇವೆ ಎಂದು ಹೇಳುತ್ತಾರೆ. ಆದರೆ, ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯ ವಿರೋಧಿ ಆಗಿರುವ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿ ಕೊಂಡು ರಾಜಕೀಯ ಸ್ವಾರ್ಥಕ್ಕಾಗಿ ಸ್ಟಾಲಿನ್ ಅವರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಜಿಲ್ಲೆಯ ಮಂಡ್ಯ ವಿಶ್ವವಿದ್ಯಾಲಯದ ಎದುರಿನಿಂದ ರಾಜ್ಯ ಯುವ ಜಾ.ದಳ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಾದಳ ಮುಖಂಡರಾದ ಬಿ.ಆರ್. ರಾಮಚಂದ್ರು, ಅಮರಾವತಿ ಚಂದ್ರಶೇಖರ್, ಸುರೇಶ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಚಂದಗಾಲು ಶಿವಣ್ಣ, ಸಿ.ಟಿ.ಮಂಜುನಾಥ್ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಕೆಆರ್ ಎಸ್ ನಲ್ಲಿ 92 ಅಡಿ ನೀರಿದ್ದರೂ ಭತ್ತ ನಾಟಿ ಮಾಡಬೇಡಿ ಎಂದು ಸರ್ಕಾರ ಫರ್ಮಾನು ಹೊರಡಿಸಿತು. ಇಂದು 86 ಅಡಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸದೆ ಮಂಡ್ಯ ಜಿಲ್ಲಾ ರೈತರು ಪರಿತಪಿಸುವಂತೆ ಮಾಡಿದೆ. ಮಂಡ್ಯ ನೆಲಕ್ಕೆ ಪ್ರವೇಶ ಮಾಡುವಾಗ ‘ಸಕ್ಕರೆ ನಾಡಿಗೆ ಸ್ವಾಗತ’ ಎಂದು ನಾಮಫಲಕ ಇರುತ್ತದೆ. ಆದರೆ, ಈ ಸರ್ಕಾರ ಮಂಡ್ಯವನ್ನು ಬರಡು ಜಿಲ್ಲೆ ಮಾಡಿದೆ. ಈ ಸರ್ಕಾರ ಬಂದ ಮೇಲೆ ಎಲ್ಲ ಕಡೆ ಕಬ್ಬು ಒಣಗಿದೆ. ಇನ್ನು ಅದಕ್ಕೆ ಬೆಂಕಿ ಹಾಕೋದು ಮಾತ್ರ ಬಾಕಿ ಇದೆ. ಕೋಟ್ಯಂತರ ರೂ. ನಾಶವಾಗಿದೆ. ಆದರೆ, ಕಾಂಗ್ರೆಸ್ 2 ಸಾವಿರ ಪರಿಹಾರ ಕೊಟ್ಟರೆ ಉಪಯೋಗ ಏನು ಎಂದು ಪ್ರಶ್ನಿಸಿದರು.
ಇನ್ನು ದೇವೇಗೌಡರು ಈ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಕೆಲವರು ಕೇಳಿದ್ದಾರೆ. ಅವರು ಕೊಟ್ಟಿರುವ ಕೊಡುಗೆ ಏನು ಎನ್ನುವುದು ಜನರಿಗೆ ಗೊತ್ತಿದೆ. ಗೊತ್ತಿಲ್ಲ ಎಂದರೆ ತಿಳಿದುಕೊಳ್ಳಿ, ಮೇಕೆದಾಟು, ಕಾವೇರಿ ನೀರಿನ ವಿಷಯದಲ್ಲಿ ರಾಜ್ಯಸಭೆಯಲ್ಲಿ ದೇವೇಗೌಡರು ಪರಿಪರಿಯಾಗಿ ಬೇಡಿಕೊಂಡರೂ ಸದನದಲ್ಲಿಯೇ ಕೂತಿದ್ದ ಮಲ್ಲಿಕಾರ್ಜುನಖರ್ಗೆ, ಇತರೆ ಕಾಂಗ್ರೆಸ್ ಸದಸ್ಯರು ಮೌನವಾಗಿ ಕೂತಿದ್ದರು. ಅವರು ಒಂದು ಮಾತನ್ನೂ ಆಡಲಿಲ್ಲ ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದರು.
ಮೊದಲು ಸ್ಟಾಲಿನ್ ಮನವೊಲಿಸಿ, ಅಥವಾ ಡಿಎಂಕೆ ಬೆದರಿಕೆಗೆ ಸೊಪ್ಪು ಹಾಕಲ್ಲ, ನಮಗೆ ಮೇಕೆದಾಟು ಯೋಜನೆ ಬೇಕು ಎಂದು ಹೇಳಿ, ಮೇಕೆದಾಟು ಯೋಜನೆಗೆ ನಾವು ಐದು ನಿಮಿಷಗಳಲ್ಲಿ ಅನುಮತಿ ಕೊಡಿಸುತ್ತೇವೆ. ನಿಮ್ಮ ಮಿತ್ರಪಕ್ಷ ಡಿಎಂಕೆ ಸರ್ಕಾರದ ಮನವೊಲಿಸಿ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಗಳನ್ನು ಹಿಂಪಡೆ ಯುವಂತೆ ಮಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು.





