ಮಂಡ್ಯ: ಅಧ್ಯಯನ ಭೋದಿ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ಮತ್ತು ಮೈತ್ರಿ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುವುದು ಹೇಗೆ ಎಂಬ ವಿಷಯದ ಕಾರ್ಯಾಗಾರವನ್ನು ಏಪ್ರಿಲ್ 13ರ ಬೆಳಿಗ್ಗೆ 10.30ಕ್ಕೆ ನಗರದ ಸ್ವಾಮಿ ವಿವೇಕಾನಂದ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಪ್ರಜ್ವಲ್ ಮೌರ್ಯ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೈತ್ರಿ ಅಕಾಡೆಮಿಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸದರಿ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲಕರ ರೀತಿಯ ಕಾರ್ಯಕ್ರಮ ಒದಗಿಸುವ ನಿಟ್ಟಿನಲ್ಲಿ ಸದರಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟಿಸಲಿದ್ದು, ಶೈಕ್ಷಣಿಕ ಕ್ಷೇತ್ರದ ಸಾಧಕರ ಭಾವಚಿತ್ರಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಪುಷ್ಪಾರ್ಚನೆ ನೆರವೇರಿಸುವರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಆಯ್ಕೆ ಬಗ್ಗೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜುನ ಸಹಾಯಕ ಪ್ರಾಧ್ಯಾಪಕ ಡಾ.ಲಕ್ಷ್ಮಣ್ ಮಾರ್ಗದರ್ಶನ ನೀಡುವರು ಎಂದು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಕುರಿತು ಅಕ್ಕ ಐಎಎಸ್ ಅಕಾಡೆಮಿಯ ಖ್ಯಾತ ಐಎಎಸ್ ತರಬೇತುದಾರ ಹಾಗೂ ಮುಖ್ಯಸ್ಥ ಡಾ.ಶಿವಕುಮಾರ್ ಹಾಗೂ ಮದ್ದೂರಿನ ಹೆಚ್.ಕೆ.ವೀರಣ್ಣಗೌಡ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ರಾವಣೀಕರ್ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವರು ಎಂದರು.
ಕಾರ್ಯಾಗಾರಕ್ಕೆ ಪಾಲ್ಗೊಳ್ಳುವವರ ನೋಂದಣಿಗೆ 100 ರೂ.ಗಳ ಶುಲ್ಕ ನಿಗದಿ ಪಡಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವನ್ನು ಕೋರಿಕೆಯ ಮೇರೆಗೆ ನೀಡಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.





