ಮಂಡ್ಯ: ಪ್ರಸ್ತುತ ಕಾಲದಲ್ಲಿ ಮಕ್ಕಳು ಅಂತರ್ಜಾಲ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಮಕ್ಕಳ ಮನಸ್ಥಿತಿ ಕುಗ್ಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹೇಳಿದರು.
ಇಂದು ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ “ಸುರಕ್ಷತ ಅಂತರ್ಜಲ ದಿನ”ದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸಮಯವನ್ನು ಬಹುತೇಕ ಟಿ.ವಿ, ಮೊಬೈಲ್‌ಗಳಲ್ಲಿಯೆ ಕಳೆಯುತ್ತಿದ್ದೇವೆ. ಸಮಾಜ ಜವಾಬ್ದಾರಿಯನ್ನು ಮರೆತಿದ್ದೇವೆ ಎಂದು ತಿಳಿಸಿದರು.
ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳು ಹಾಗೂ ಹೃದಯ ಸಂಬಂಧಿ ಕಾಯಿಲೆಗಳು ಮನುಷ್ಯರಲ್ಲಿ ಹೆಚ್ಚಾಗುತ್ತಿವೆ. 20 ವರ್ಷಗಳ ಹಿಂದೆ ಜನರು ತಮ್ಮ ಕುಟುಂಬ ಸ್ನೇಹಿತರೊಂದಿಗೆ ಸಮಯ ಕಳೆದು ಕೆಲಸದ ಒತ್ತಡವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದರು ಆದರೆ ಇಂದು ಅತಿಯಾದ ಮೊಬೈಲ್ ಬಳಕೆಯಿಂದ ಎಲ್ಲರ ಬದುಕಿನಲ್ಲಿಯೂ ಒತ್ತಡ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ತಂತ್ರಜ್ಞಾನವನ್ನು ಬಳಸಿ ಯಾವುದೇ ಪ್ರಶ್ನೆಗಳಿಗಾದರೂ ಉತ್ತರವನ್ನು ಕ್ಷಣಾರ್ಧದಲ್ಲಿಯೇ ಕಂಡುಕೊಳ್ಳಬಹುದು. ಅಂತರ್ಜಾಲವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹೆಚ್ಚಿನ ಸಮಯ ಅಂತರ್ಜಾಲದಲ್ಲಿ ಕಳೆಯುವುದು ಒಳ್ಳೆಯದಲ್ಲ ಸಾಧ್ಯವಾದಷ್ಟು ಅಂತರ್ಜಾಲದಿಂದ ದೂರ ಉಳಿಯಬೇಕು. ಸಾರ್ವಜನಿಕರು ಇದರ ಕುರಿತಾಗಿ ಅರಿತುಕೊಳ್ಳಬೇಕು ಎಂದರು.
ಕಚೇರಿ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ಹಂಚಿಕೊಳ್ಳಬೇಡಿ. ಸೈಬರ್ ಗಳ್ಳರು ನಿಮ್ಮ ಸಂಪೂರ್ಣ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪಡೆದು ನಿಮ್ಮ ಹಿಂದೆ ಬೀಳುತ್ತಾರೆ ಆದ್ದರಿಂದ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಿರಿ. ಸೈಬರ್ ಕಳ್ಳರಿಂದ ಯಾವುದೇ ಕರೆ ಬಂದರೂ ಸಹ ಧೃತಿಗೆಡದೆ ಸೈಬರ್ ಸಹಾಯವಾಣಿಗೆ ಕರೆ ಮಾಡಿ ಪ್ರಕರಣ ದಾಖಲಿಸಿ ಸೈಬರ್ ವಂಚನೆಯಿಂದ ದೂರ ಉಳಿಯಿರಿ ಹಾಗೂ ಇದರ ಕುರಿತಾಗಿ ನಿಮ್ಮ ಒಡನಾಡಿಗಳಿಗೂ ಅರಿವು ಮೂಡಿಸಿ ಎಂದು ಹೇಳಿದರು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಹಿರಿಯ ತಾಂತ್ರಿಕ ನಿರ್ದೇಶಕರಾದ ಸಂಗೀತ ಮಂಜುನಾಥ್ ಅವರು ಮಾತನಾಡಿ ಇವತ್ತಿನ ಮಕ್ಕಳು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ ಫೇಸ್ಬುಕ್ ಗಳಲ್ಲಿ ಮುಳುಗಿ ಹೋಗಿದ್ದಾರೆ. ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಮಾನಸಿಕ ಸಮಸ್ಯೆ ಹೆಚ್ಚಾಗಿ ಉದ್ಭವಿಸುತ್ತಿದೆ. ಮಕ್ಕಳು ಹಿರಿಯರೊಂದಿಗೆ ಸಮಯ ಕಳೆಯುವುದನ್ನು ಮರೆತು ಹೋಗಿದ್ದಾರೆ ಎಂದು ಹೇಳಿದರು.
ಜನರು ಸಾಮಾಜಿಕ ಜಾಲತಾಣ ವೈಯಕ್ತಿಕ ಫೋಟೋಗಳ ಹಂಚಿಕೆಯನ್ನು ಕಡಿಮೆ ಮಾಡಬೇಕು ಇದರಿಂದ ಸೈಬರ್ ಕಳ್ಳರು ಡೀಪ್ ಫೇಕ್ ನಂತಹ ಅಪಾಯ ಉಂಟಾಗುತ್ತದೆ. ಅಂತರ್ಜಾಲದಲ್ಲಿ ಫ್ರಾಡ್ ಆಗುವ ಸಾಧ್ಯತೆ ಇರುತ್ತದೆ ಸುಳ್ಳು ಮಾಹಿತಿಯನ್ನು ಹರಿ ಬಿಡಲಾಗುತ್ತಿದೆ. ಜನರು ಇದರ ಕುರಿತಾಗಿ ಅರಿಯಬೇಕು. ಆಗ ಮಾತ್ರ ಆನ್ ಲೈನ್ ವಂಚನೆಯಿಂದ ಬಚಾವಾಗಬಹುದು ಎಂದು ತಿಳಿಸಿದರು.
ಅಪರಿಚಿತ ನಂಬರ್ ಗಳಿಂದ ಕರೆ ಮಾಡಿ ಓ.ಟಿ.ಪಿ. ಯು.ಪಿ.ಐ ಪಿನ್ ಅನ್ನು ಯಾರೆ ಕೇಳಿದರು ಹೇಳಬೇಡಿ. ಇಂತಹ ಕರೆ ಬಂದ ನಂತರ ಭಯ ಪಡದೆ ಐ.ಟಿ ಸೈಬರ್ ನಂಬರ್ 930 ಗೆ ಕರೆ ಮಾಡಿ ಅಥವಾ ಸಂಚಾರ್ ಸತಿ ವೆಬ್ ನಲ್ಲಿ ಪ್ರಕರಣ ದಾಖಲಿಸಿ ಎಂದು ಮಾಹಿತಿ ನೀಡಿದರು.
ಕಾರ್ಯಗಾರದ ನಂತರ ಸೈಬರ್ ಕ್ರೈಂ ಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಜಿಲ್ಲಾ ರಾಷ್ಟ್ರೀಯ ಮಾಹಿತಿ ಕೇಂದ್ರದ ಕೆ.ವಿ.ಕೆ ಅಪ್ಪರಾವ್, ರಾಷ್ಟ್ರೀಯ ಮಾಹಿತಿ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ಜಿಲ್ಲಾ ಪಂಚಾಯತ್ ಸರ್ಕಾರಿ ನೌಕರರು ಉಪಸ್ಥಿತರಿದ್ದರು.





