Mysore
14
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ: ಹೆಚ್‌ಡಿಕೆ ಕುರಿತು ಚಲುವರಾಯಸ್ವಾಮಿ ವ್ಯಂಗ್ಯ

ಮಂಡ್ಯ: ಮಾಜಿ ಸಚಿವ ಸಿ ಎಸ್‌ ಪುಟ್ಟರಾಜು ಅವರನ್ನು ಅಭ್ಯರ್ಥಿ ಎಂದು ತಾವೇ ಹೇಳಿ ಇದೀಗ ಅವರೇ ಅಭ್ಯರ್ಥಿಯಾಗುತ್ತಿದ್ದಾರೆ. ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದ್ವೆ ಆದಂತಿದೆ ಜೆಡಿಎಸ್‌ ಪರಿಸ್ಥಿತಿ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌ ಚಲುವರಾಯಸ್ವಾಮಿ ಅವರು ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ವ್ಯಂಗವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಂಡ್ಯ ಜಿಲ್ಲೆಗೆ ಕೆಟ್ಟ ದೃಷ್ಟಿ ಬೀಳುವುದು ಬೇಡ, ನಾವು, ನಮ್ಮ ಜನ ಏನೋ ಮಾಡಿಕೊಳ್ಳುತ್ತೇವೆ. ನೀವು ಪ್ರಧಾನಿಯಾಗಿ, ಇನ್ನೊಮ್ಮೆ ಸಿಎಂ ಆಗಿ, ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ. ಆದರೆ ನಮ್ಮ ಜಿಲ್ಲೆಯ ತಂಟೆಗೆ ಮಾತ್ರ ಬರಬೇಡಿ ಎಂದು ಟೀಕಿಸಿದ್ದಾರೆ.

ಚಿಕ್ಕಬಳ್ಳಾಪುರ, ತುಮಕೂರು ಮುಗಿಸಿ ಈಗ ಮಂಡ್ಯಕ್ಕೆ ಬರುತ್ತಿದ್ದಾರೆ. ಪಾಪ, ಪುಟ್ಟರಾಜು ಕೈಯಲ್ಲಿ ಸಭೆ ಮಾಡಿಸಿದರು. ಆಯೋಧ್ಯೆಯ ರಾಮಮಂದಿರ ಸೇರಿ ಹಲವು ದೇವಾಲಯಗಳನ್ನು ಸುತ್ತಿಸಿದರು. ಈಗ ತಾನೇ ಅಭ್ಯರ್ಥಿ ಅಂದರೆ ಪುಟ್ಟರಾಜು ಕತೆ ಏನಾಗಬೇಕು ನಾನು ಕಾಂಗ್ರೆಸ್‌ ಸೇರಿ ಬಚಾವ್‌ ಆದೆ ಎಂದರು.

ಕಳೆದ ಬಾರಿಯ ಚುನಾವಣೆಯಲ್ಲಿ ಸುಮಲತಾ ಅವರನ್ನು ನಿಂದಿಸಿದರು. ಆದರೆ ಈಗ ಅಕ್ಕ ಎನ್ನುತ್ತಿದ್ದಾರೆ. ಆಗಲೇ ಈ ಮಾತು ಹೇಳಿದ್ದರೆ ಅಂಬರೀಷ್‌ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಅವರ ಬಗ್ಗೆ ಕ್ಷೇತ್ರದಾದ್ಯಂತ ಉತ್ತಮ ಅಭಿಪ್ರಾಯಯವಿದ್ದು, ನಮ್ಮ ವಿರುದ್ಧ ಯಾರೇ ಅಭ್ಯರ್ಥಿಯಾದರೂ ನಮಗೆ ಚಿಂತೆ ಇಲ್ಲ ಎಂದರು.

Tags:
error: Content is protected !!