Mysore
29
scattered clouds
Light
Dark

ಪರಿಸರ ಸ್ನೇಹಿ, ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಿ: ಡಾ: ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸೌಹಾರ್ದತೆಯ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಿಸಿ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಆಚರಣೆ ಸಂಬಂಧ ಸೌಹರ್ದತೆ ಸಭೆ ನಡೆಸಿ ಅವರು ಮಾತನಾಡಿದರು. ಹಬ್ಬಗಳ ಆಚರಣೆಗೂ ಸಹ ಸರ್ಕಾರದಿಂದ ಹೊರಡಿಸಿರುವ ನಿಯಮ ಹಾಗೂ ಮಾರ್ಗದರ್ಶನಗಳಿರುತ್ತದೆ. ಅವುಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಉಚ್ಛ ನ್ಯಾಯಾಲಯ ಈಗಾಗಲೇ ಆದೇಶ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಹಾನಿಕಾರಕ ಬಣ್ಣ ಲೇಪಿತ ಗಣಪತಿಯನ್ನು‌ ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲ‌. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಜನನ ಜೇಡಿ ಮಣ್ಣಿನಲ್ಲಿ ನಿರ್ಮಾಣ ಮಾಡಿರುವ ಮುದ್ದಾದ ಗಣಪತಿ ಪ್ರತಿಷ್ಠಾಪಿಸಿ ಹಬ್ಬ ಆಚರಿಸಿ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಅನುಮತಿಗೆ ಸಿಂಗಲ್ ವಿಂಡೋ ಸಿಸ್ಟಮ್ ಮೂಲಕ‌ ಅನುಮತಿ ನೀಡಲಾಗುತ್ತಿದೆ. ಅರ್ಜಿಯಲ್ಲಿ ಗಣಪತಿ ವಿಸರ್ಜನೆ ಮಾಡುವ ಸ್ಥಳವನ್ನು ಸಹ ನಮೂದಿಸುವುದು ಕಡ್ಡಾಯವಾಗಿರುತ್ತದೆ ಎಂದರು.

ಗಣಪತಿಯನ್ನು ಸ್ಥಳೀಯ ಸಂಸ್ಥೆಗಳು ವಿಸರ್ಜನೆ ಮಾಡಲು ನಿಗದಿಮಾಡಿರುವ ಸ್ಥಳದಲ್ಲಿ ವಿಸರ್ಜನೆ ಮಾಡಿ. ಅಲಂಕಾರಕ್ಕೆ ಬಳಸುವ ವಸ್ತುಗಳನ್ನು ಬೇರ್ಪಡಿಸಿ ವಿಸರ್ಜನೆ ಮಾಡಿ. ಪ್ಲಾಸ್ಟಿಕ್ ವಸ್ತುಗಳನ್ನು ಅಲಂಕಾರಕ್ಕೆ‌ ಬಳಸಬೇಡಿ ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮುಗಲಭೆಗಳು ನಡೆದಿಲ್ಲ ಇನ್ನು ಮುಂದೆಯೂ ಕೂಡ ಅಂತಹ ಸಂಗತಿಗಳಿಗೆ ಅವಕಾಶ ಕೊಡದಂತೆ ಹಬ್ಬ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ, ಪರಸ್ಪರವಾಗಿ, ಪ್ರತಿಯೊಬ್ಬರ ಸಹಭಾಗಿತ್ವ ಸಹಕಾರದಿಂದ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರು ಎಂಬ ಭಾವನೆಯಿಂದ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು.

ಧ್ವನಿವರ್ಧಕಗಳಲ್ಲಿ ಧ್ವನಿ 30 ಡೆಸಿಬಲ್ ಮಾತ್ರ ಇರಬೇಕು ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಳಸುವಂತಿಲ್ಲ. ಈಗೆ ಹಲವಾರು ನಿಯಮಗಳಿವೆ. ನಿಯಮಗಳನ್ನು ಕಡ್ಡಾಯವಾಗಿ ಪರಿಗಣಿಸಬೇಕು ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು‌.

ಪ್ರತಿಯೊಬ್ಬರೂ ಪರಸ್ಪರ ಸಹಕಾರದಿಂದ ಹಬ್ಬ ಆಚರಿಸಿ: ಶೇಖ್ ತನ್ವೀರ್ ಆಸೀಫ್

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಮಾತನಾಡಿ, ಈ 2 ಹಬ್ಬಗಳು ಕೂಡ ಪ್ರಮುಖವಾದ ಧಾರ್ಮಿಕ ಹಬ್ಬ ಆಗಿರುವುದರಿಂದ ಧರ್ಮಗಳಲ್ಲಿ ಬೇಧ-ಭಾವ ಮಾಡದೆ ಪರಸ್ಪರ ಸಹಕಾರದಿಂದ ಹಬ್ಬ ಆಚರಣೆ ಮಾಡಿ ಎಂದು ಹೇಳಿದರು.

ಗಣಪತಿ ವಿಸರ್ಜನೆಗೆ ನಗರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸುವ ಸ್ಥಳದಲ್ಲಿ ವಿಸರ್ಜನೆ ಮಾಡಬೇಕು. ಗ್ರಾಮ ಪಂಚಾಯಿತಿ ಹಂತದಲ್ಲಿ ಯಾವ ಸಹಾಯ ಸಹಕಾರ ಬೇಕು ಅದನ್ನು ನೀಡಲಾಗುವುದು. ಜಿಲ್ಲೆಗೆ ಅಥವಾ ಜಿಲ್ಲೆಯ ಜನಗಳಿಗಾಗಲೀ ಯಾವುದೇ ರೀತಿಯ ಕಪ್ಪು ಚುಕ್ಕೆ ಬರದಂತೆ ಹಬ್ಬಗಳ ಆಚರಣೆ ಮಾಡಿ ಎಂದು ಹೇಳಿದರು.