ಮಂಡ್ಯ ; ಕಾವೇರಿ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಕಾರಣ ಕಬಿನಿ ಮತ್ತು ಕೆಆರ್ ಎಸ್ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಹೊರಗೆ ಬಿಡುಗಡೆ ಮಾಡಲಾಗಿದೆ. ಈ ಮೂಲಕವಾಗಿ ಕಾವೇರಿ ತಮಿಳುನಾಡಿನ ದಾಹ ತಣಿಸಿದ್ದಾಳೆ.
ಕೆಆರ್ ಎಸ್ ಜಲಾಶಯ ಭರ್ತಿಗೆ ಇನ್ನು ಕೇವಲ ೨ ಅಡಿಯಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಿಂದ ಕಾವೇರಿ ನದಿ ಮೂಲಕ ಹೊರಹರಿವಿನ ಪ್ರಮಾಣವನ್ನು ೫೦ ಸಾವಿರ ಕ್ಯೂಸೆಕ್‌ಗೆ ಏರಿಸಲಾಗಿದೆ. ಇದರಿಂದ ನದಿ ಮೂಲಕ ತಮಿಳುನಾಡಿಗೂ ಕೂಡ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಅಲ್ಲದೆ ಜಲಾಶಯಕ್ಕೆ ಇನ್ನೂ ಎರಡು ಮೂರು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಬರುವ ನಿರೀಕ್ಷೆಯಿದ್ದು, ಹೊರಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಲಿದೆ.
ಮೊನ್ನೆಯಷ್ಟೇ ತಮಿಳುನಾಡು ನಮಗೆ ಕಾವೇರಿ ನೀರು ಹರಿಸುತ್ತಿಲ್ಲ ಎಂದು ಕಾವೇರಿ ಪ್ರಾಧಿಕಾರದ ಮುಂದೆ ವಾದ ಮಂಡಿಸಿತ್ತು. ಈ ಹಿನ್ನೆಲೆ ಪ್ರಾಧಿಕಾರವು ಜುಲೈ ಅಂತ್ಯದವರೆಗೆ ಪ್ರತಿದಿನ ೧ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು.ಆದ್ರೆ ಇತ್ತ ಸಿಎಂ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ನಡೆಸಿ ಅಷ್ಟೋಂದು ನೀರು ಬಿಡಲು ಆಗಲ್ಲ. ದಿನಕ್ಕೆ ೧೮೦೦ ಕ್ಯೂಸೆಕ್ ಮಾತ್ರ ಬಿಡುತ್ತೇವೆ ಎಂದು ತೀರ್ಮಾನ ಕೈಗೊಂಡಿದ್ದರು. ಆದರೆ ಈಗ ಎಲ್ಲೆಡೆ ಉತ್ತಮವಾದ ಮಳೆಯಾಗಿರುವ ಕಾರಣ ಕಾವೇರಿ ಒಡಲು ಬಹುತೇಕ ಭರ್ತಿಯಾಗಿದೆ. ಹೀಗಾಗಿ ತಮಿಳುನಾಡು ಕೇಳಿದ್ದಿಕಿಂತ ಹೆಚ್ಚಿನ ನೀರೇ ಹರಿದು ಹೋಗುತ್ತಿದೆ. ಈ ಮೂಲಕವಾಗಿ ತಮಿಳುನಾಡಿನ ನೀರಿನ ದಾಹವನ್ನು ಕಾವೇರಿ ಮಾತೆ ನೀಗಿಸಿದ್ದಾಳೆ.





