ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಗುತ್ತಿಗೆದಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಲೋಕೋಪಯೋಗಿ ಕಚೇರಿ ಆವರಣದಿಂದ ಮೆರವಣಿಗೆ ಹೊರಟು ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ರಾಜ್ಯ ಸರ್ಕಾರ ಮತ್ತು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಜಿಲ್ಲಾ ರೈತ ಇತರ ಕ್ಷಣ ಸಮಿತಿ ನಡೆಸುತ್ತಿರುವ ನಿರಂತರ ಧರಣಿ ಸ್ಥಳಕ್ಕೆ ತೆರಳಿ ಕಾವೇರಿ ಹೋರಾಟ ಬೆಂಬಲ ಸೂಚಿಸಿದ ಪ್ರತಿಭಟನಾ ನಿರತ ಗುತ್ತಿಗೆದಾರರು ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯ ವಾಗುತ್ತಿದ್ದು, ತಮಿಳುನಾಡಿಗೆ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ತಕ್ಷಣ ನೆರೆ ರಾಜ್ಯಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಸಿ ಪರಿಹಾರ ರೂಪಿಸಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ. ಕೆಂಪಣ್ಣ, ಕಾರ್ಯಾಧ್ಯಕ್ಷ ಮಂಜುನಾಥ್, ಜಿಲ್ಲಾಧ್ಯಕ್ಷ ಯತಿರಾಜ್, ಮುಖಂಡರಾದ ನಾಗರಾಜು,ಕೃಷ್ಣೇಗೌಡ, ಆರ್.ನಾಗೇಶ್,ಮಾರುತಿ, ಸುನಿಲ್ ಬಾಬು,
ತ್ಯಾಗರಾಜ, ರವೀಂದ್ರ, ಕೆ.ಟಿ ಹನುಮಂತು ನೇತೃತ್ವ ವಹಿಸಿದ್ದರು.