ಮಂಡ್ಯ : ಮನೆ ಬಾಗಿಲು ಒಡೆದು ಒಳನುಗ್ಗಿರುವ ಕಳ್ಳರು ಚಿನ್ನಾಭರಣ, ನಗದು ದೋಚಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಕೆ.ಆರ್.ಎಸ್.ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಿಲ್ಪಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, 70 ಗ್ರಾಂ ಚಿನ್ನಾಭರಣ, 75 ಸಾವಿರ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.
ಶಿಲ್ಪಾ ತಮ್ಮ ಕುಟುಂಬದವರ ಸಮೇತ ಭಾನುವಾರ ತಿರುಪತಿಗೆ ದೇವರ ದರ್ಶನಕ್ಕೆ ತೆರಳಿದ್ದರು. ಬುಧವಾರ ಬೆಳಿಗ್ಗೆ ವಾಪಸ್ ಬಂದಾಗ ಮನೆ ಬೀಗ ಮುರಿದಿರುವುದು ಕಂಡು ಬಂದಿದೆ. ತಕ್ಷಣ ಕೆ.ಆರ್.ಸಾಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಪಿ.ಎಸ್.ಐ. ರಮೇಶ್ ಕರ್ಕಿಕಟ್ಟಿ ಮತ್ತು ಸುಷ್ಮಾ ರಾಥೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಮಂಡ್ಯ ಜಿಲ್ಲಾ ಬೆರಳಚ್ಚು ಹಾಗೂ ಶ್ವಾನ ದಳ, ಸೋಕೊ ತಂಡ ಭೇಟಿ ನೀಡಿ ಪರಿಶೀಲಿಸಿ, ಕೃತ್ಯ ನಡೆದ ಸ್ಥಳದಲ್ಲಿ ಅಗತ್ಯವಾದ ಸಾಕ್ಷಿ ಹಾಗೂ ಮಾಹಿತಿ ಪಡೆದರು.





