Mysore
29
clear sky

Social Media

ಶನಿವಾರ, 31 ಜನವರಿ 2026
Light
Dark

ಅದ್ಧೂರಿಯಾಗಿ ಬೂದನೂರು ಉತ್ಸವ ಆಚರಣೆ : ಪಿ.ರವಿಕುಮಾರ್

ಮಂಡ್ಯ : ಕಳೆದ 2024ರಲ್ಲಿ ಬೂದನೂರು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಸದರಿ ವರ್ಷವೂ ಸಹ ಅದ್ಧೂರಿಯಾಗಿ ಉತ್ಸವವನ್ನು ಆಚರಿಸಲಾಗುವುದು ಎಂದು ಶಾಸಕ ಪಿ. ರವಿಕುಮಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಬೂದನೂರು ಉತ್ಸವ-2026ರ ಪೂರ್ವ ತಯಾರಿ ಚಟುವಟಿಕೆಗಳ ಕುರಿತು ಚರ್ಚಿಸಲು ಶುಕ್ರವಾರ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಸರ್ಕಾರದಿಂದ 15 ಲಕ್ಷ ಹಣ ಮಾತ್ರ ಬೂದನೂರು ಉತ್ಸವಕ್ಕೆ ಬಿಡುಗಡೆ ಮಾಡಲಾಗಿತ್ತು. ಯಾರಿಂದಲೂ ಹಣ ಕೇಳದೆ ಸುಮಾರು 1 ಕೋಟಿ ವೆಚ್ಚದಲ್ಲಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು ಎಂದು ತಿಳಿಸಿದರು.

ಕೇರಳ ಬಿಟ್ಟರೆ ಬೂದನೂರಿನಲ್ಲಿ ಶ್ರೀ ಅನಂತಪದ್ಮನಾಭ ದೇವಾಲಯ
ಕೇರಳದಲ್ಲಿ ಬಿಟ್ಟರೆ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯ ಇರುವುದು ಮಂಡ್ಯ ಜಿಲ್ಲೆಯ ಹೊಸಬೂದನೂರಿನಲ್ಲಿ ಮಾತ್ರ, ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ಸಂಗತಿ. ಬೂದನೂರು ಉತ್ಸವಕ್ಕೆ ಬರಲು ಸಾರ್ವಜನಿಕರಿಗೆ ವಾಹನಗಳ ಸೌಲಭ್ಯ ಹಾಗೂ ವಾಹನಗಳಿಗೆ ಅಚ್ಚುಕಟ್ಟಾಗಿ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ವಿವಿಧ ಕಲಾತಂಡಗಳೊಂದಿಗೆ ಹಳೇಬೂದನೂರಿನಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಸ್ಥಳೀಯರು ಸಹಕರಿಸಿದರೆ 32 ಪೂಜಾ ಕುಣಿತ ತಂಡಗಳನ್ನು ಮೆರವಣಿಗೆಯಲ್ಲಿ ಆಯೋಜಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುವುದು. ಆಹಾರ ಮೇಳವನ್ನು ಸಹ ಸದರಿ ಉತ್ಸವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ರಂಗೋಲಿ ಸ್ಪರ್ಧೆ
ಕಸಬಾ ಹೋಬಳಿ ಪ್ರತಿ ಮನೆಯಿಂದ ರಂಗೋಲಿ ಸ್ಪರ್ಧೆ ಆಯೋಜಿಸಲಾಗುವುದು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮೂರು ಜನರಿಗೆ ನಗದು ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ವೈಯಕ್ತಿಕವಾಗಿ ನನ್ನ ಕಡೆಯಿಂದ ವಿಶೇಷ ಉಡುಗೊರೆಯನ್ನು ನೀಡಲಾಗುವುದು. ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ನಗದು ಬಹುಮಾನ ಮತ್ತು ಭಾಗವಹಿಸಿದವರಿಗೆ ಉಡುಗೊರೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮಾತನಾಡಿ, 2024ರಲ್ಲಿ ಬೂದನೂರು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಗಿತ್ತು. ಬೂದನೂರಿನ ಶ್ರೀ ಕಾಶಿ ವಿಶ್ವನಾಥ ಮತ್ತು ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯದ ವಾಸ್ತುಶಿಲ್ಪ ಬೇಲೂರು-ಹಳೇಬೀಡಿನಷ್ಟೆ ಸುಂದರವಾಗಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ದೇವಾಲಯಗಳಾಗಿ ಹೊರಹೊಮ್ಮಿವೆ. ದೇವಾಲಯದ ಕಲೆ ವಾಸ್ತುಶಿಲ್ಪವನ್ನು ಉಳಿಸಬೇಕು ಎಂಬ ಸದುದ್ದೇಶದಿಂದ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಅವರು ಬೂದನೂರು ಉತ್ಸವವನ್ನು ಆಚರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಬೂದನೂರು ಉತ್ಸವದ ಪೂರ್ವ ತಯಾರಿಗಾಗಿ ಈಗಾಗಲೇ ಸ್ವಾಗತ ಸಮಿತಿ, ವೇದಿಕೆ ಸಮಿತಿ ಸೇರಿದಂತೆ ಸಮಿತಿಗಳನ್ನು ರಚಿಸಲಾಗಿದೆ. ಬೂದನೂರು ಉತ್ಸವದಲ್ಲಿ ಸ್ಥಳೀಯರಿಗೆ ದೇಶಿ ಕ್ರೀಡೆಗಳನ್ನು ಆಯೋಜಿಸಲಾಗುವುದು. ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆಯಲಾಗುವುದು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮಹಿಳೆಯರು ಮತ್ತು ಸಾರ್ವಜನಿಕರಿಗೆ ಪ್ರೋತ್ಸಾಹ ನೀಡಲು ರಂಗೋಲಿ, ಚಿತ್ರಕಲೆ, ಹಗ್ಗಜಗ್ಗಾಟ. ಕಬಡ್ಡಿ ಸೇರಿದಂತೆ ಇನ್ನಿತರೆ ಕ್ರೀಡೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಬೂದನೂರು ಉತ್ಸವವನ್ನು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಮನಸ್ತಾಪ ಬಿಟ್ಟು ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್. ನಂದಿನಿ. ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಅಪರ ಪೊಲೀಸ್ ಅಧಿಕ್ಷಕ ಸಿ.ಇ. ತಿಮ್ಮಯ್ಯ, ತಹಸಿಲ್ದಾರ್ ವಿಶ್ವನಾಥ್, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಮನ್‌ಮುಲ್ ಅಧ್ಯಕ್ಷ ಯು.ಸಿ. ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಚ್.ಎನ್. ಯೋಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags:
error: Content is protected !!