ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದಲ್ಲಿ ಗದ್ದೆಗಿಳಿದು ರೈತರೊಂದಿಗೆ ಭತ್ತದ ನಾಟಿ ಮಾಡಿದರು.
ಯುವಕ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಂಡ್ಯ ಜಿಲ್ಲೆಯ ಕೊತ್ತತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿದರು.
ಮಂಡ್ಯಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿ ಮೆರವಣಿಗೆಯೊಂದಿಗೆ ಮಂಡ್ಯದಿಂದ ಕೊತ್ತತ್ತಿಗೆ ಟ್ರ್ಯಾಕ್ಟರ್‌ನಲ್ಲಿ ಕರೆ ತಂದರು.
ಈ ವೇಳೆ ಬಿವೈ ವಿಜಯೇಂದ್ರ ಅವರು ಖುದ್ದು ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಮೆರವಣಿಗೆಯಲ್ಲಿ ಗ್ರಾಮಕ್ಕೆ ಆಗಮಿಸಿ ರೈತರನ್ನು ಹುರಿದುಂಬಿಸಿದರು. ಬಳಿಕ ಹಲವಾರು ರೈತರೊಂದಿಗೆ ಗದ್ದೆಗಿಳಿದು ಭತ್ತ ನಾಟಿ ಮಾಡಿದರು.
ಭತ್ತ ನಾಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಅಂದ್ರೆ ಯಡಿಯೂರಪ್ಪ ಅವರಿಗೆ ಜನ್ಮ ಕೊಟ್ಟ ಪುಣ್ಯಭೂಮಿ. ನಾನು ಕೂಡ ಮಂಡ್ಯ ಜಿಲ್ಲೆಯ ಮೊಮ್ಮಗ. ಯಡಿಯೂರಪ್ಪ ರೈತರ ಪರ ಹೋರಾಟ ಮಾಡಿಕೊಂಡು ಬಂದವರು. ಅವರಿಗೆ ಪ್ರೇರಣೆ ಸಿಕ್ಕಿದ್ದೆ ಮಂಡ್ಯ ಮಣ್ಣಿನ ಪ್ರಭಾವದಿಂದಾಗಿ. ಯಡಿಯೂರಪ್ಪ ರೈತರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದವರು. ರೈತರಿಗೆ ಪಂಪ್ ಸೆಟ್ ಕೊಟ್ಟ ಏಕೈಕ ನಾಯಕ ಯಡಿಯೂರಪ್ಪ. ಆದರೆ ಕಾಂಗ್ರೆಸ್ ಸರ್ಕಾರ ಬಂದ ನಂತರ ರೈತರ ಪರ ನಿರ್ಧಾರ ಮಾಡಿಲ್ಲ. ಬದಲಾಗಿ ಕಾವೇರಿ ಕೊಳ್ಳದ ರೈತರಿಗೆ ಅನ್ಯಾಯ ಆಗಿದೆ. ತಮಿಳುನಾಡಿನ ಸ್ಟಾಲಿನ್‌ರನ್ನು ಖುಷಿ ಪಡಿಸಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.





