Mysore
25
scattered clouds

Social Media

ಮಂಗಳವಾರ, 05 ನವೆಂಬರ್ 2024
Light
Dark

ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಲ್ಲಿ ಅರಿವು ಅವಶ್ಯಕ : ಮಂಜುಳ ಇಟ್ಟಿ

ಮಂಡ್ಯ: ಪೋಕ್ಸೋ ಕಾಯ್ದೆಯ ತಿಳುವಳಿಕೆಯಿಲ್ಲದೆ 16 ರಿಂದ 20 ವರ್ಷದೊಳಗಿನವರು ದೌರ್ಜನ್ಯಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಮಕ್ಕಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ( ಪೋಕ್ಸೋ) ಕಾಯ್ದೆ- 2012 ರ ಅರಿವು ಅವಶ್ಯಕ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುಳ ಇಟ್ಟಿ ತಿಳಿಸಿದರು.

ಅವರು ಇಂದು(ಜೂ.28) ಪಿ.ಇ.ಎಸ್. ಕಾಲೇಜಿನ ಕೆ.ವಿ.ಶಂಕರೇಗೌಡ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ 2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು‌.

ಲೈಂಗಿಕ ಅಪರಾಧದಲ್ಲಿ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಸಹ ಬಲಿಪಶುಯಾಗಿರುವ ಪ್ರಕರಣಗಳು ಇವೆ ಆದರಿಂದ ಈ ಕಾಯ್ದೆಯ ಬಗ್ಗೆ ಗಂಡು/ ಹೆಣ್ಣು ಎಂಬ ಬೇದವಿಲ್ಲದೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎರಡು ಬೇರೆ ಎರಡಕ್ಕೂ ಸಹ ವ್ಯತ್ಯಾಸ ಇದೆ. ಕಾಯ್ದೆಯಲ್ಲಿ ಪ್ರತಿಯೊಂದಕ್ಕೂ ಶಿಕ್ಷೆ ಇದೆ ಎಂದರು.

ಫೇಸ್ ಬುಕ್, ಇನ್ಸಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ನೇಹಿತರಾಗಿ ತಮ್ಮ ವೈಯಕ್ತಿಕ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಣದ ಬೇಡಿಕೆ ಇಟ್ಟಾಗ ಮನೆಯಲ್ಲಿ ವಿಷಯ ತಿಳಿಸುವ ದೈರ್ಯ ಮಾಡದೇ ಆತ್ಮಹತ್ಯಗೆ ಒಳಗಾಗಿರುವ ಉದಾಹರಣೆಗಳಿವೆ.
ಮಕ್ಕಳು ತಮ್ಮ ಮೇಲೆ ಲೈಂಗಿಕ ಕಿರುಕುಳವಾಗುತ್ತಿದೆ ಎನ್ನಿಸಿದಾಗ ಅದನ್ನು ವಿರೋಧಿಸಬೇಕು. ಶಿಕ್ಷಕರು ಹಾಗೂ ಪೋಷಕರಿಗೆ ತಿಳಿಸಿ ರಕ್ಷಣೆ ಪಡೆದುಕೊಳ್ಳಬೇಕು. ಮನೆಯಲ್ಲಿ ವಿಷಯ ತಿಳಿಸಲು ಎದರಿ ನೋವನ್ನು ಅನುಭವಿಸುತ್ತ ಆತ್ಮಹತ್ಯೆಯಂತಹ ದಾರಿಯನ್ನು ತುಳಿಯಬಾರದು ಎಂದು ಕಿವಿಮಾತು ಹೇಳಿದರು.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚು.‌ ಇದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಹತ್ವ ಹೆಚ್ಚಿದೆ ಎಂದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈ ಹಿಂದೆ ಮಕ್ಕಳು ಮತ್ತು ಮಹಿಳೆಯರಿಗೆ ಪ್ರಮುಖ್ಯತೆ ಇರಲಿಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ವಿಶೇಷ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಲ್ಲಿ ಅಪರಾಧಿಗಳಿಗೆ ಹೆಚ್ಚಿನ ಪ್ರಮಾಣದ ಶಿಕ್ಷೆ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆನಂದ್ ಎಂ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ಟಿ.ರಾಜೇಂದ್ರ, ಜನತಾ ಶಿಕ್ಷಣ ಟ್ರಸ್ಟ್ ನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಣ್ಣಮೊಗ ಕೆ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಲಕ್ಷ್ಮಿ ಪ್ರಸನ್ನ, ಮಹೇಶ್ ಎಂ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಎಸ್ ಉಪಸ್ಥಿತರಿದ್ದರು.

Tags: