ಮಂಡ್ಯ: ಮಂಡ್ಯ ಜಿಲ್ಲೆಯ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ ದಿನಾಂಕ:31-10-2017ಕ್ಕೂ ಪೂರ್ವದಲ್ಲಿ ಗ್ರಾಮ ಪಂಚಾಯತ್ ನಿಂದ ನೇಮಕಗೊಂಡು ನೀರುಗಂಟಿ, ಸ್ವಚ್ಛತಗಾರ, ಅಟೆಂಡರ್ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 590 ಸಿಬ್ಬಂದಿಗಳಿಗೆ ಅನುಮೋದನೆ ನೀಡಲಾಗಿದ್ದು, ಸದರಿ ಸಿಬ್ಬಂದಿಗಳಿಗೆ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾನ್ಯ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ಪ್ರತಿ ವಿತರಿಸಿದರು.
ಸರ್ಕಾರದ ನಿರ್ದೇಶನದಂತೆ ಗ್ರಾಮ ಪಂಚಾಯತ್‌ನ ಅರ್ಹ ಸಿಬ್ಬಂದಿಗಳಿಗೆ ಅನುಮೋದನೆ ನೀಡುವಂತೆ ಸಿಇಓ ಅವರಿಗೆ ಸೂಚಿಸಲಾಗಿತ್ತು. ಸಿಇಓ ಮತ್ತು ಅವರ ತಂಡ ಅತ್ಯಂತ ಪಾರದರ್ಶಕವಾಗಿ ಅನುಮೋದನೆ ಪ್ರಕ್ರಿಯೆ ಪೂರ್ಣಗೊಳಿಸಿದೆ ಎಂದು ಮಾನ್ಯ ಸಚಿವರು ತಿಳಿಸಿದರು.
ಸರ್ಕಾರದ ಆದೇಶ ಸಂಖ್ಯೆ:ಕೆ.ಪಿ.ಆರ್.ಸಿ/ಜಿಪಿಎ/450/2023, ದಿನಾಂಕ:18-11-2023ರಂತೆ ನೌಕರರ ಅನುಮೋದನೆ ಪ್ರಕ್ರಿಯೆ ಕೈಗೊಳ್ಳಲು ಹಾಗೂ ಅನುಮೋದನೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಒಟ್ಟು ನಾಲ್ಕು ಹಂತಗಳಲ್ಲಿ ನೌಕರರ ದಾಖಲಾತಿಗಳ ಪರಿಶೀಲನಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು, ಈ ಪ್ರಕ್ರಿಯೆ ಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಶಾಸಕರು ಮತ್ತು ಆಡಳಿತ ವರ್ಗಕ್ಕೆ ಸಿಇಓ ಅವರು ಅಭಿನಂದನೆ ಸಲ್ಲಿಸಿದರು.
ನಂತರದಲ್ಲಿ ತಾಲ್ಲೂಕುವಾರು ಪ್ರಸ್ತಾವನೆಗಳನ್ನು ಪ್ರತ್ಯೇಕ ಪರಿಶೀಲನಾ ಸಮಿತಿಯಿಂದ ಪರಿಶೀಲಿಸಿ, ನಡವಳಿಯಲ್ಲಿ ದಾಖಲಿಸಿ ಅಂತಿಮವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದಿಂದ ಮರುಪರಿಶೀಲನೆಗೆ ಒಳಪಡಿಸಿ ಅರ್ಹ ನೌಕರರ ಅನುಮೋದನೆಯ ತಾತ್ಕಾಲಿಕ ಪಟ್ಟಿಯನ್ನು ಸಿದ್ದಪಡಿಸಿ, ಪಟ್ಟಿಯನ್ನು ಜಿಲ್ಲಾ ಪಂಚಾಯತ್ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್‌ಗಳ ಸೂಚನಾ ಫಲಕದಲ್ಲಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.
ಆಕ್ಷೇಪಣೆ ಸಲ್ಲಿಕೆ ಅವಧಿ ಪೂರ್ಣಗೊಂಡ ನಂತರ 590 ಸಿಬ್ಬಂದಿಗಳಿಗೆ ಅನುಮೋದನೆ ನೀಡಲಾಗಿದ್ದು, ಆದೇಶದ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್.ಅವರು ತಿಳಿಸಿದರು.





